ಜಿಲ್ಲೆ

ಜಗದೀಶ ಶೆಟ್ಟಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಉಳ್ಳಾಲ ತಾಲೂಕು ಅಂಬ್ಲಮೊಗರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಜಗದೀಶ ಶೆಟ್ಟಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

1988ರ ನ.1ರಂದು ಶಿಕ್ಷಕ ವೃತ್ತಿ ಆರಂಭಿಸಿದ ಅವರು, 13 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿದ್ದಾರೆ. ಇರಾ-ಬಾಳೆಪುಣಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

35 ವರ್ಷಗಳಿಂದ ಸ್ಕೌಟ್ಸ್ ಶಿಕ್ಷಕರಾಗಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಸ್ಕೌಟ್ಸ್ -ಗೈಡ್ಸ್ ರಾಷ್ಟ್ರೀಯ ಸಂಸ್ಥೆಯಿಂದ ಅಸಿಸ್ಟೆಂಟ್ ಲೀಡರ್ ಟ್ರೈನರ್ ಉನ್ನತ ತರಬೇತಿ ಪಡೆದು ರಾಜ್ಯದಲ್ಲಿ ಅನೇಕ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ದೆಹಲಿ, ಒರಿಸ್ಸಾ, ಕೇರಳ, ಮಧ್ಯಪ್ರದೇಶ, ನೇಪಾಳ, ವಾರಣಾಸಿ, ಅಂಡಮಾನ್ ಮುಂತಾದ ರಾಜ್ಯಗಳಲ್ಲಿ ತರಬೇತುದಾರರ ಸಮಾವೇಶದಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ.

ಸ್ಕೌಟ್ಸ್-ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಯಾಗಿ ರಾಜ್ಯಮಟ್ಟದ ಸಮುದಾಯ ಅಭಿವೃದ್ಧಿ ಶಿಬಿರ, ರಾಜ್ಯಮಟ್ಟದ ಕಬ್ ಬುಲ್‌ಬುಲ್ ಉತ್ಸವ, ಎರಡು ಬಾರಿ ಜಿಲ್ಲಾಮಟ್ಟದ ಸ್ಕೌಟ್ಸ್-ಗೈಡ್ಸ್ ಮೇಳ, ಉತ್ಸವ ಮತ್ತು ತಾಲೂಕು ಮಟ್ಟದ ಹಲವು ಸ್ಕೌಟ್ಸ್-ಗೈಡ್ಸ್ ಮೇಳ ಹಾಗೂ ಉತ್ಸವಗಳ ನೇತೃತ್ವ ವಹಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ 14 ವರ್ಷಗಳಿಂದ ತಾಲೂಕು ಅಧ್ಯಕ್ಷರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಸದಸ್ಯ, ತಾಲೂಕು ಸಾಕ್ಷರತಾ ಮುಂದುವರಿಕೆ ಕಲಿಕಾ ಕೇಂದ್ರದ ಕಾರ್ಯದರ್ಶಿ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿ, ಮೀಂಜ ಬಂಟರ ಸಂಘದ ಅಧ್ಯಕ್ಷರಾಗಿ ಸಮಾಜದ ಅಭಿವೃದ್ಧಿಗೆ ಶ್ರಮ ವಹಿಸಿದ್ದಾರೆ.

ಪ್ರಗತಿಪರ ಕೃಷಿಕರಾಗಿದ್ದು, ಭತ್ತ, ಅಡಕೆ, ತೆಂಗು, ಬಾಳೆ, ರಬ್ಬರ್ ಕೃಷಿ ಅಲ್ಲದೆ ರಂಬುಟನ್, ಬಟರ್‌ಫ್ರೂಟ್, ಮ್ಯಾಂಗಸ್ಟಿನ್ ಮುಂತಾದ ಹಣ್ಣುಗಳ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ.

ಪಡೆದ ಪ್ರಶಸ್ತಿ ಪುರಸ್ಕಾರಗಳು: ಉತ್ತಮ ಶಿಸ್ತು ಶಾಲಾ ಪ್ರಶಸ್ತಿ, ಉತ್ತಮ ನೈರ್ಮಲ್ಯ ಶಾಲಾ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಕೇರಳ ರಾಜ್ಯ ತುಳು ಅಕಾಡೆಮಿ ಪ್ರಶಸ್ತಿ, ಸ್ಕೌಟಿಂಗ್ ದೀರ್ಘ ಸೇವಾ ಪ್ರಶಸ್ತಿ, ಜೇಸಿ ಉತ್ತಮ ಶಿಕ್ಷಕ ಪ್ರಶಸ್ತಿ, ರೋಟರಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಕರಾವಳಿ ಸಾಂಸ್ಕೃತಿಕ ಪರಿಷತ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಶಾಲಾ ಶತಮಾನೋತ್ಸವ ಗೌರವ ಸನ್ಮಾನ ಪಡೆದಿದ್ದಾರೆ.

ಮಂಜೇಶ್ವರ ಕುಳೂರು ಎಲಿಯಾಣದ ಕೃಷಿ ಕುಟುಂಬದ ಸೇಕಪ್ಪ ಶೆಟ್ಟಿ ಮತ್ತು ಕಮಲ ದಂಪತಿ ಐವರು ಮಕ್ಕಳ ಪೈಕಿ ಜಗದೀಶ್ ಶೆಟ್ಟಿ ಓರ್ವರು. ಅವರ ಪತ್ನಿ ತಲಪಾಡಿ ಪಟ್ನ ಸರ್ಕಾರಿ ಶಾಲಾ ಶಿಕ್ಷಕಿ. ಮಕ್ಕಳಿಬ್ಬರು ಸಿವಿಲ್ ಇಂಜಿನಿಯರಿಂಗ್ ಪದವಿ ಪೂರೈಸಿ ಸ್ವಂತ ಉದ್ಯೋಗದಲ್ಲಿದ್ದಾರೆ.