ಜಿಲ್ಲೆ

ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ; ಬಿಜೆಪಿ ಸೇರ್ಪಡೆ ವದಂತಿ ಕುರಿತು ಶೆಟ್ಟರ್ ಸ್ಪಷ್ಟನೆ

Webdesk - Manjunatha B

ಹುಬ್ಬಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸಲು ಟಿಕೆಟ್​ ನಿರಾಕರಿಸಿದರೆಂಬ ಕಾರಣಕ್ಕೆ ಬಿಜೆಪಿ ವಿರುದ್ಧ ಸಿಡಿದೆದ್ದು, ಕಾಂಗ್ರೆಸ್​ ಸೇರಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಮರಳುತ್ತಾರೆ ಎಂಬ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದ್ದು, ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ ಎಂದು ಜಗದೀಶ್​ ಶೆಟ್ಟರ್​ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಜಗದೀಶ್​ ಶೆಟ್ಟರ್​, ನನ್ನನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಬೇಕೆಂದು ಹಲವು ನಾಯಕರ ಒತ್ತಾಸೆಯಾಗಿದೆ. ನನಗೆ ಆಗಿರೋ ಅಪಮಾನವನ್ನು ನಾನು ಇನ್ನೂ ಮರೆತಿಲ್ಲ. ನಾನು ಬಿಜೆಪಿ ತೊರೆದ ನಂತರ ಆಗಿರುವ ಹಾನಿ ಬಗ್ಗೆ ಅವರಿಗೆ ಮನವರಿಕೆಯಾಗಿದೆ. ಈ ನಿಟ್ಟಿನಲ್ಲಿ ಕೆಲವರು ನನ್ನನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿ ಇದ್ದಾರೆ.

ಹಲವಾರು ನಾಯಕರು ವಾಪಸ್ ತರುವಂತೆ ಒತ್ತಡ ಹಾಕ್ತಿರೋ ಮಾಹಿತಿ ಇದೆ. ಯಾರು ಏನೇ ಪ್ರಯತ್ನ ಮಾಡಿದರೂ ನಾನು ಬಿಜೆಪಿಗೆ ವಾಪಾಸ್ಸಾಗಲ್ಲ. ಯಾವುದೇ ಕಾರಣಕ್ಕೂ ನಾನು ಬಿಜೆಪಿಗೆ ಮತ್ತೆ ವಾಪಸಾಗುವುದಿಲ್ಲ. ಘರ್ ವಾಪ್ಸಿ ಪ್ರಶ್ನೆಯೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್​ ಕುಮಾರ್​ ಹೆಗಡೆ ವಾಗ್ದಾಳಿ ಕುರಿತು ಪ್ರತಿಕ್ರಿಯಿಸಿ, ಅವರು ಹದ್ದು ಮೀರಿ ವರ್ತಿಸುತ್ತಿದ್ದಾರೆ. ಲಕ್ಷ್ಮಣ ರೇಖೆ ದಾಟಿ ಮಾತನಾಡುತ್ತಿದ್ದಾರೆ. ಇಷ್ಟುದಿನ ನಾಪತ್ತೆಯಾದವರು ಈಗ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಜಿಲ್ಲೆಗೆ ಬಂದಾಗ ಇವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.