ಜಿಲ್ಲೆ

ಯುವತಿ ಪರ ವಕೀಲರ ಸ್ಫೋಟಕ ಹೇಳಿಕೆ: ಪೊಲೀಸ್​ ಆಯುಕ್ತರ ಮುಂದೆ ಸಿಡಿ ಲೇಡಿ ಬರ್ತಾಳಂತೆ! ಆದರೆ...

ಬೆಂಗಳೂರು: ಸಿಡಿ ಪ್ರಕರಣದ ಯುವತಿಗೆ ತಾನು ಸೇಫ್​ ಅನಿಸಿದರೆ ಆಕೆಯೇ ಮುಂದೆ ಬಂದು ಸ್ವತಃ ಹೇಳಿಕೆ ನೀಡಲು ಸಿದ್ಧವಾಗಿದ್ದಾಳೆಂದು ಯುವತಿ ಪರ ವಕೀಲರಾದ ಜಗದೀಶ್​ ಕೆ.ಎನ್.​ ಮಹದೇವ್​ ಹೇಳಿದರು.

ಸಿಡಿ ಲೇಡಿಯ ಮೂರನೇ ವಿಡಿಯೋ ಬಿಗಡೆಯಾದ ಬೆನ್ನಲ್ಲೇ ಫೇಸ್​ಬುಕ್​ ಲೈವ್​ನಲ್ಲಿ ಪ್ರಕರಣ ಕುರಿತು ಜಗದೀಶ್​ ಮಾತನಾಡಿದರು. ನಮ್ಮನ್ನು ನಂಬಿ ಯುವತಿ ಲಿಖಿತ ದೂರು ಕಳುಹಿಸಿದ್ದಾಳೆ. ಅದನ್ನು ಬೆಂಗಳೂರು ಪೊಲೀಸ್​ ಆಯುಕ್ತರಿಗೆ ತಲುಪಿಸಲು ನಮ್ಮ ವಕೀಲರ ತಂಡ ತೆರಳುತ್ತಿದ್ದೇವೆ ಎಂದರು.

ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣವನ್ನು ಸರ್ಕಾರ ಎಸ್​ಐಟಿ ತನಿಖೆಗೆ ವಹಿಸಿದೆ. ಯುವತಿಯ ವಿಚಾರವನ್ನು ಸಹ ಎಸ್​ಐಟಿ ನೋಡಿಕೊಳ್ಳುತ್ತಿದೆ. ಸಿಡಿ ಯುವತಿಗೆ ಕಾನೂನು ರಕ್ಷಣೆ ಬೇಕಾದರೆ ನಾವು ನೀಡಲು ಸಿದ್ಧ ಎಂದು ಈ ಹಿಂದೆ ಘೋಷಣೆ ಮಾಡಿದ್ದೆವು. ಆಕೆಯು ಸಹ ನನಗೆ ರಕ್ಷಣೆ ಬೇಕೆಂದು ವಿಡಿಯೋ ಸಹ ಮಾಡಿದ್ದಾಳೆ. ಆಕೆ ಇಂದು ನಮಗೊಂದು ಲಿಖಿತ ದೂರಿನ ಪ್ರತಿಯನ್ನು ಕಳುಹಿಸಿದ್ದಾಳೆ ಎಂದರು.

ನಮ್ಮನ್ನು ನಂಬಿ ಲಿಖಿತ ದೂರು ಕಳುಹಿಸಿದ್ದಾಳೆ. ಅದನ್ನು ಬೆಂಗಳೂರು ಪೊಲೀಸ್​ ಆಯುಕ್ತರಿಗೆ ತಲುಪಿಸಲು ನಮ್ಮ ವಕೀಲರ ತಂಡ ಮಧ್ಯಾಹ್ನ 2.30ಕ್ಕೆ ತೆರಳುತ್ತಿದ್ದೇವೆ. ಆಕೆ ಸದ್ಯ ಪ್ರಾಣ ಭೀತಿಯಲ್ಲಿರುವುದರಿಂದ ಪತ್ರ ಹೇಗೆ ಕಳುಹಿಸಿದಳು ಎಂಬ ಮೂಲವನ್ನು ಹೇಳಲು ಸಾಧ್ಯವಿಲ್ಲ ಎಂದರು.

ಪೊಲೀಸ್​ ಆಯುಕ್ತರ ಕಚೇರಿಯಲ್ಲಿ ಯಾವ ಬೆಳವಣಿಗೆ ಆಗುತ್ತದೆ ಎಂಬುದನ್ನು ಸಹ ತಿಳಿಸುತ್ತೇವೆ. ಪೊಲೀಸ್​, ಎಸ್​ಐಟಿ ಮತ್ತು ಸಿಎಂ ಬಿಎಸ್​ವೈ ಸರ್ಕಾರ ಆಕೆಗೆ ನ್ಯಾಯ ಕೊಡುತ್ತದೆ ಎಂದು ಆಕೆಗೆ ಅನಿಸಿದರೆ ಖಂಡಿತವಾಗಿಯು ಪೊಲೀಸ್​ ಆಯುಕ್ತರ ಮುಂದೆ ಬಂದು ಸ್ವತಃ ಹೇಳಿಕೆ ಕೊಡಲು ಸಿದ್ಧವಾಗಿದ್ದಾಳೆ ಎಂದು ತಿಳಿಸಿದರು.

ದೇಶದಲ್ಲಿ ಬಲಿಷ್ಠನಿಗೆ ನ್ಯಾಯ ಸಿಗುತ್ತದೆ. ಆದರೆ, ಕನಿಷ್ಠನಿಗೆ ನ್ಯಾಯ ಸಿಗುವುದು ವಿರಳ. ಈ ರೀತಿ ನ್ಯಾಯ ಸಿಕ್ಕಾಗ ಮಾತ್ರ ಸಂವಿಧಾನ ಉಳಿಯವುದು ಎಂದು ಹೇಳಿ ಜಗದೀಶ್ ಫೇಸ್​ಬುಕ್​ ಲೈವ್​ ಮುಗಿಸಿದರು. ​