ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ದಾಸೋಹ ಭವನದಲ್ಲಿ ಹಮ್ಮಿಕೊಂಡ ತರಬೇತಿ ಕಾರ್ಯಗಾರವನ್ನು ಶಿರೂರಿನ ಡಾ. ಬಸವಲಿಂಗ ಸ್ವಾಮಿಗಳು ಉದ್ಘಾಟಿಸಿದರು. ಸಂಗಯ್ಯ ಹಿರೇಮಠ ಇತರರು ಇದ್ದರು. 
ಜಿಲ್ಲೆ

ಸಹಕಾರ ಕ್ಷೇತ್ರ ನಾಡಿಗೆ ಪರಿಚಯಿಸಿದವರು ವಿಶ್ವಗುರು ಬಸವಣ್ಣ

ಇಳಕಲ್ಲ : ಬಸವಣ್ಣನವರು 12ನೇ ಶತಮಾನದಲ್ಲೇ ನಾಡಿಗೆ ಸಹಕಾರ ಕ್ಷೇತ್ರವನ್ನು ಪರಿಚಯಿಸಿದ್ದಾರೆ ಎಂದು ಶಿರೂರಿನ ಬಸವಲಿಂಗ ಸ್ವಾಮಿಗಳು ಹೇಳಿದರು.

ನಗರದ ವಿಜಯ ಮಹಾಂತೇಶ ಚಿತ್ತರಗಿ ಸಂಸ್ಥಾನ ಮಠದ ದಾಸೋಹ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬಾಗಲಕೋಟೆ ಜಿಲ್ಲಾ ಸಹಕಾರಿ ಯೂನಿಯನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಬಿಜ್ಜಳ ಆಸ್ಥಾನದಲ್ಲಿ ಪ್ರತಿನಿತ್ಯ ಎಲ್ಲ ಸರ್ವಧರ್ಮದವರನ್ನು ಸೇರಿಸಿ ದಿನನಿತ್ಯ ಕಾರ್ಯಕ್ರಮ ನಡೆಸುತ್ತಿದ್ದರು. ಈ ಕಾರ್ಯಕ್ರಮ ಪರಸ್ಪರರ ಸಹಕಾರದಿಂದ ನಡೆಯುತ್ತಿತ್ತು ಎಂದು ತಿಳಿಸಿದರು.

ಸಹಕಾರ ಕ್ಷೇತ್ರದ ಬೆಳವಣಿಗೆಗೆ ಎಲ್ಲರ ಸಹಕಾರ ಅಗತ್ಯ. ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ತರಬೇತಿ ಅವಶ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಗಯ್ಯ ಹಿರೇಮಠ ಮಾತನಾಡಿ, ಕಾಲಕ್ಕೆ ತಕ್ಕಂತೆ ಸರ್ಕಾರ ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ತಂದಿದೆ.

ಅವುಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಅರಿವು ಹೊಂದಲಿ ಎನ್ನುವ ಉದ್ದೇಶದಿಂದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಅನ್ನಪೂರ್ಣ ಹೇಮವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತರಬೇತಿ ಕಾರ್ಯಕ್ಕೆ ವಿಶೇಷ ಉಪನ್ಯಾಸಕರಾಗಿ ಹೊಸಪೇಟೆಯ ಲಿಯಾಖತ ಅಲಿ ಹಾಗೂ ಸಾಂತಪ್ಪ ಶಾಂತಗೇರಿ, ಲಕ್ಷ್ಮಣ ಪಲಮಾರಿ, ಮಹಾಬಳೇಶ ಮರಟದ, ಜೆ. ಎನ್. ದೋಟಿಹಾಳ, ಮಹಮ್ಮದ್ ಯೂಸ್ು ಕಟಂಬ್ಲಿ ಆಗಮಿಸಿದ್ದರು. ಎಂ. ಎಸ್. ನಾಗರಾಳ ನಿರೂಪಿಸಿದರು.