ಜಿಲ್ಲೆ

ನಮ್ಮ ಮೆಟ್ರೋ ಸ್ಮಾರ್ಟ್​ ಕಾರ್ಡ್​ಗೆ ಬೇಡಿಕೆ! ಉದ್ಯೋಗಿಗಳಿಗಾಗಿ ಕಾರ್ಡ್​ ಖರೀದಿಗಿಳಿದ ಕಂಪನಿಗಳು

ರಾಮ ಕಿಶನ್​ ಕೆ.ವಿ. ಬೆಂಗಳೂರು
'ನಮ್ಮ ಮೆಟ್ರೋ' ಟಿಕೆಟ್​ ಕೌಂಟರ್​ಗಳಲ್ಲಿ ಉಂಟಾಗುತ್ತಿರುವ ಒತ್ತಡವನ್ನು ತಗ್ಗಿಸಲು ಬಿಎಂಆರ್​ಸಿಎಲ್​ (ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ) ಈಗಾಗಲೇ ಅನೇಕ ಉಪಕ್ರಮಗಳನ್ನು ಅನುಸರಿಸುತ್ತಿರುವುದು ಗೊತ್ತೇ ಇದೆ. ಸ್ಮಾರ್ಟ್​ ಕಾರ್ಡ್​, ಕ್ಯೂ ಆರ್​ ಕೋಡ್​, ವಾಟ್ಸ್​ಆ್ಯಪ್​ ಟಿಕೆಟ್​ ಸೌಲಭ್ಯಗಳನ್ನು ಜಾರಿಗೊಳಿಸಿದೆ. ವೈಯಕ್ತಿಕ ನೆಲೆಯಲ್ಲಿ ಹಲವರು ಈ ಸೌಕರ್ಯಗಳ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆದರೀಗ, ಕಂಪನಿಗಳೇ ನೂರಾರು ಕಾರ್ಡ್​ಗಳನ್ನು ಖರೀದಿಸಿ ತಮ್ಮ ಉದ್ಯೋಗಿಗಳಿಗೆ ನೀಡಲು ಮುಂದಾಗಿರುವುದು ಹೊಸ ಬೆಳವಣಿಗೆ.

ಖಾಸಗಿ ಕಂಪನಿಗಳು ದೊಡ್ಡ ಸಂಖ್ಯೆಯಲ್ಲಿ ಬಿಎಂಆರ್​ಸಿಎಲ್​ನಿಂದ ಸ್ಮಾರ್ಟ್​ ಕಾರ್ಡ್​ ಖರೀದಿಸುವುತ್ತಿರುವುದರ ಹಿಂದೆ ಮಹತ್ವದ ಉದ್ದೇಶವಿದೆ. ಅದು, ಸಾರ್ವಜನಿಕ ಸಾರಿಗೆ ಬಳಸಲು ಉತ್ತೇಜನ. ಖಾಸಗಿ ವಾಹನ ಬಿಟ್ಟು, ಮೆಟ್ರೋ ಮೂಲಕ ಉದ್ಯೋಗಿಗಳು ಕೆಲಸಕ್ಕೆ ಬಂದರೆ ಸಂಸ್ಥೆಗೂ ಲಾಭವಿದೆ. ಕೆಲ ಕಂಪನಿಗಳು ಉದ್ಯೋಗಿಗಳಿಗೆ ಪಾರ್ಕಿಂಗ್​ ಸೌಲಭ್ಯ ನೀಡಲು ಬಾಡಿಗೆ ನೀಡಿ ಜಾಗ ಪಡೆದುಕೊಳ್ಳುತ್ತವೆ. ಇದಕ್ಕಾಗಿ ದೊಡ್ಡ ಮೊತ್ತವನ್ನು ವಿನಿಯೋಗಿಸಬೇಕಾಗಿದೆ. ನೌಕರರು ಸಾರ್ವಜನಿಕ ಸಾರಿಗೆ ಬಳಸಿ ಕೆಲಸಕ್ಕೆ ಬಂದರೆ ಅವರಿಗೆ ಪಾರ್ಕಿಂಗ್​ ಸೌಲಭ್ಯ ಕಲ್ಪಿಸುವ ತಲೆಬಿಸಿ ತಪ್ಪಿದಂತಾಗುತ್ತದೆ, ಜತೆಗೆ ಸುರಕ್ಷಿತ ಪ್ರಯಾಣಕ್ಕೆ ಒತ್ತು ನೀಡಿದಂತೆಯೂ ಆಗುತ್ತದೆ.

ಮೆಟ್ರೋದಲ್ಲಿ ತೆರಳುವುದರಿಂದ ಸಮಯ ಉಳಿತಾಯದ ಜತೆಗೆ, ಟ್ರಾಫಿಕ್​ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬಹುದು. ಇತ್ತೀಚೆಗೆ ಕೆಲ ಮೆಟ್ರೋ ನಿಲ್ದಾಣಗಳಿಂದ ಐಟಿ ಕಂಪನಿಗಳ ಆವರಣಕ್ಕೆ ನೇರ ಸಂಪರ್ಕ ಕಲ್ಪಿಸಿಕೊಡಲಾಗುತ್ತಿದೆ. ಒಟ್ಟಾರೆ ನಗರದಲ್ಲಿ ಕೆಲಸ ಮಾಡುತ್ತಿರುವ ಐಟಿ ಉದ್ಯೋಗಿಗಳು ಮೆಟ್ರೋದಲ್ಲಿ ಓಡಾಟ ನಡೆಸಲು ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. ಇದರಿಂದ ನಗರದಲ್ಲಿ ಸಂಚಾರದಟ್ಟಣೆಯೂ ಕೊಂಚ ಕಡಿಮೆಯಾಗುತ್ತಿದೆ.

ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚಳ

ನಗರದ ಹೆಚ್ಚಿನ ಸಂಖ್ಯೆಯ ಖಾಸಗಿ ಸಂಸ್ಥೆಗಳು ಸ್ಮಾರ್ಟ್​ಕಾರ್ಡ್​ಗಳನ್ನು ಖರೀದಿಸಿ ಉದ್ಯೋಗಿಗಳಿಗೆ ನೀಡಲು ಆಸಕ್ತಿ ವಹಿಸಿವೆ. ಈ ಬಗ್ಗೆ ಬಿಎಂಆರ್​ಸಿಎಲ್​ ಜತೆಗೆ ಮಾತುಕತೆ ನಡೆಸುತ್ತಿವೆ. ಈ ಉಪಕ್ರಮದಿಂದ ಟ್ರಾಫಿಕ್​ ಕಡಿಮೆಯಾಗುತ್ತದೆ. ಜತೆಗೆ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚುತ್ತದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಸ್ಮಾರ್ಟ್​ ಕಾರ್ಡ್​ ಮಾರಾಟ ಹೆಚ್ಚಳ

ಟಿಕೆಟ್​ ಕೌಂಟರ್​ಗಳಲ್ಲಿ 50 ರೂ. ಠೇವಣಿ ನೀಡಿ, ಯಾರು ಬೇಕಾದರೂ ಸ್ಮಾರ್ಟ್​ ಕಾರ್ಡ್​ ಪಡೆದುಕೊಳ್ಳಬಹುದು. ಬಳಿಕ ಮೊಬೈಲ್​ಗೆ ರೀಚಾರ್ಜ್​ ಮಾಡುವಂತೆ, ಈ ಕಾರ್ಡ್​ಗಳಿಗೆ ಪ್ರಿಪೇಡ್​ ಮಾದರಿಯಲ್ಲಿ ರೀಚಾರ್ಜ್​ ಮಾಡಬೇಕು. ಇದರ ಬಳಕೆಯಿಂದ ಟೋಕನ್​ ಟಿಕೆಟ್​ ಖರೀದಿಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಈವರೆಗೆ 50 ಲಕ್ಷಕ್ಕೂ ಅಧಿಕ ಮಂದಿ ಮೆಟ್ರೋ ಸ್ಮಾರ್ಟ್​ ಕಾರ್ಡ್​ಗಳನ್ನು ಪಡೆದುಕೊಂಡಿದ್ದಾರೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

ಮೊಬೈಲ್​ ಕ್ಯೂಆರ್​ ಗ್ರೂಪ್​ ಟಿಕೆಟ್​

ಹಿಂದೆ ಮೊಬೈಲ್​ ಕ್ಯೂಆರ್​ ಕೋಡ್​ ಟಿಕೆಟ್​ಗಳನ್ನು ಆ್ಯಪ್​ ಮೂಲಕ ಒಬ್ಬರಿಗೆ ಒಂದು ಟಿಕೆಟ್​ ನೀಡಲಾಗುತ್ತಿತ್ತು. ಪ್ರಯಾಣಿಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಬಿಎಂಆರ್​ಸಿಎಲ್​ 'ಗ್ರೂಪ್​ ಟಿಕೆಟ್​'ಗಳನ್ನು ಕಳೆದ ನವೆಂಬರ್​ನಿಂದ ಜಾರಿಗೆ ತಂದಿದೆ. ಕೌಂಟರ್​ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಟಿಕೆಟ್​ ಖರೀದಿಸುವ ಬದಲು, ಪ್ರಯಾಣಿಕರು ತಾವಿರುವ ಸ್ಥಳದಿಂದಲೇ ಮುಂಗಡವಾಗಿ ಸುಲಭವಾಗಿ ಕ್ಯೂಆರ್​ ಟಿಕೆಟ್​ ಪಡೆಯಬಹುದು. ಈ ಟಿಕೆಟ್​ಗಳಿಗೆ ಶೇ.5 ರಿಯಾಯಿತಿ ನೀಡಲಾಗಿದೆ.

ನಿತ್ಯ 6.5 ಲಕ್ಷ ಮಂದಿ ಪ್ರಯಾಣ

ನಮ್ಮ ಮೆಟ್ರೋದಲ್ಲಿ ನಿತ್ಯ 6.5 ಲಕ್ಷ ಜನರು ಪ್ರಯಾಣಿಸುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ದಟ್ಟಣೆ ಅವಧಿಯಲ್ಲಿ ಪ್ರಮುಖ ನಿಲ್ದಾಣಗಳು ಗಿಜಿಗುಡುತ್ತಿರುತ್ತವೆ. ಟಿಕೆಟ್​ ಕೌಂಟರ್​ಗಳಲ್ಲಿ ಉದ್ದನೆಯ ಸರತಿ ಸಾಲು ಕಂಡುಬರುತ್ತಿವೆ. ಕಳೆದ ನವೆಂಬರ್​ನಲ್ಲಿ 1.99 ಕೋಟಿ ಜನರು ಪ್ರಯಾಣಿಸಿದ್ದಾರೆ.