ಜಿಲ್ಲೆ

ಸೂಕ್ತ ಆಧಾರವಿಲ್ಲದೆ ಅತ್ಯಾಚಾರ ಎನ್ನಲಾಗದು; ಒಪ್ಪಿತ ಲೈಂಗಿಕ ಕ್ರಿಯೆ ವಿಚಾರದಲ್ಲಿ ಹೈಕೋರ್ಟ್ ಅಭಿಪ್ರಾಯ

ಮೋಹನ್​ ಶೆಟ್ಟಿ

ಬೆಂಗಳೂರು: ಪರಸ್ಪರ ಒಪ್ಪಿತ ಸಂಬಂಧಗಳು ನಿರಾಶದಾಯಕವಾಗಿ ಕೊನೆಗೊಂಡಾಗ ಖಚಿತ ಆಧಾರಗಳಿಲ್ಲದ ಹೊರತು ಅದನ್ನು ಕ್ರಿಮಿನಲ್ ಕಾನೂನಿನಲ್ಲಿ ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಡೇಟಿಂಗ್ ಅಪ್ಲಿಕೇಷನ್ ಮೂಲಕ ಪರಿಚಯಸ್ಥ ಅತ್ಯಾಚಾರ ನಡೆಸಿದ್ದಾನೆಂದು ಮಹಿಳೆ ನೀಡಿದ್ದ ದೂರು ಆಧರಿಸಿ ದಾಖಲಾಗಿದ್ದ ಎಫ್​ಐಆರ್ ರದ್ದುಗೊಳಿಸುವಂತೆ ಕೋರಿ 23 ವರ್ಷದ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.

ಪ್ರಕರಣದ ಚಾರ್ಜ್​ಶೀಟ್ ಮತ್ತು ಅರ್ಜಿದಾರರ ಒದಗಿಸಿದ್ದ ದೂರುದಾರೆ ಮತ್ತು ತನ್ನ ನಡುವಿನ ಸಂದೇಶಗಳ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಈ ಸಂದೇಶಗಳನ್ನು ಇಲ್ಲಿ ಓದಲು ಸಾಧ್ಯವಿಲ್ಲ. ಆದರೆ, ಇದು ಅರ್ಜಿದಾರ ಮತ್ತು ಮಹಿಳೆಯ ನಡುವೆ ನಡೆದ ಎಲ್ಲ ಕಾರ್ಯಗಳು ಪರಸ್ಪರ ಒಪ್ಪಿತವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ದೂರು ಆಧರಿಸಿ ತನಿಖೆ ಮುಂದುವರಿಸಲು ಅನುಮತಿ ನೀಡಿದರೆ ಅದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ಎಫ್​ಐಆರ್ ರದ್ದುಗೊಳಿಸಿ ತೀರ್ಪು ನೀಡಿತು.

ಪ್ರಕರಣದ ಹಿನ್ನೆಲೆ: ಡೇಟಿಂಗ್ ಅಪ್ಲಿಕೇಷನ್ ಮೂಲಕ ಆರೋಪಿ ಮತ್ತು ಮಹಿಳೆ ಪರಿಚಯವಾಗಿದ್ದು, ನಂತರ ಇನ್​ಸ್ಟಾಗ್ರಾಂ ಮೂಲಕ ಫೋಟೋ ಮತ್ತು ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. 2024ರ ಆ.11ರಂದು ಇಬ್ಬರೂ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗಿದ್ದಾರೆ. ಊಟ ಮಾಡಿದ ನಂತರ ಹೋಟೆಲ್​ಗೆ ತೆರಳಿದ್ದಾರೆ. ಮರುದಿನ ಆರೋಪಿ ಮಹಿಳೆಯನ್ನು ಅಪಾರ್ಟ್​ವೆುಂಟ್​ಗೆ ಬಿಟ್ಟುಹೋಗಿದ್ದಾನೆ. ಅದರ ಮರುದಿನ ಮಹಿಳೆ ತಮ್ಮನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಿದ್ದು, ತಾನು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿರುವುದು ಆಕೆಗೆ ತಿಳಿದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಲಾಗಿತ್ತು.

ಪ್ರಾಸಿಕ್ಯೂಷನ್ ಪರ ವಾದಿಸಿದ ವಕೀಲರು, ಆರೋಪಿಯು ದೂರುದಾರರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅದನ್ನು ಪರಸ್ಪರ ಒಪ್ಪಿತ ಕ್ರಿಯೆ ಎನ್ನಲಾಗದು. ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ ಬೆಳೆಸುವುದು ಭಾರತೀಯ ನ್ಯಾಯ ಸಂಹಿತೆಯಲ್ಲಿ ಅಪರಾಧವಾಗಿದೆ. ಇದು ಆ ರೀತಿಯ ಪ್ರಕರಣವಲ್ಲದಿದ್ದರೂ, ತನಿಖೆ ಆಗಬೇಕಿದೆ ಎಂದಿದ್ದರು.

ನೆರವಾದ ಚಾಟ್

ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದ ಆರೋಪಿ, ಮಹಿಳೆಯೊಂದಿಗಿನ ಇನ್​ಸ್ಟಾಗ್ರಾಂ ಚಾಟ್​ನ ವಿವರಗಳನ್ನು ನ್ಯಾಯಾಲಯಕ್ಕೆ ದಾಖಲೆಯಾಗಿ ನೀಡಿದ್ದರು. ಅದರಲ್ಲಿರುವ ವಿವರಗಳು ತಮ್ಮ ನಡುವೆ ನಡೆದ ಲೈಂಗಿಕ ಸಂಪರ್ಕ ಪರಸ್ಪರ ಒಪ್ಪಿತವಾಗಿತ್ತು ಎಂದು ತಿಳಿಸುತ್ತದೆ. ಆದರೆ, ಮಹಿಳೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಾದಿಸಿದ್ದರು.