ಬೆಂಗಳೂರು: ಲಾಕ್ಡೌನ್ ಪಾಸ್ ವಿತರಣೆಯಲ್ಲಿ ಪೊಲೀಸ್ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಪೊಲೀಸ್ ಆಯುಕ್ತರಿಗೆ ಕೆಪಿಸಿಸಿ ದೂರು ನೀಡಿದೆ. ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ನಿಯೋಗ ಮಂಗಳವಾರ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತು. ಪಕ್ಷದಿಂದ ಪರಿಹಾರ ಕಾರ್ಯಮಾಡಲು ಕಾರ್ಯಕರ್ತರಿಗೆ ಪಾಸ್ ನೀಡಿ ಎಂದು ಕೇಳಿದರೆ ರಾಜಕೀಯ ಪಕ್ಷಗಳಿಗೆ ಪಾಸ್ ನೀಡುವುದಿಲ್ಲ ಎಂದು ನಿಮ್ಮ ಇಲಾಖೆ ಹೇಳುತ್ತದೆ. ಆದರೆ, ಬಿಜೆಪಿ ಮತ್ತು ಆರ್ಎಸ್ಎಸ್ನವರಿಗೆ ಹತ್ತಾರು ಸಾವಿರ ಪಾಸ್ ವಿತರಣೆ ಮಾಡಲಾಗಿದೆ ಎಂದು ಸಲೀಂ ಅಹ್ಮದ್ ಅಸಮಾಧಾನ ವ್ಯಕ್ತಪಡಿಸಿದರು.
ಪರಿಹಾರ ದುರ್ಬಳಕೆ ಆರೋಪ: ಕರೊನಾ ಕಾರಣದಿಂದ ಕಷ್ಟದಲ್ಲಿರುವ ಜನಸಾಮಾನ್ಯರ ಸಹಾಯಕ್ಕಾಗಿ ಸರ್ಕಾರಗಳು ನೀಡುತ್ತಿರುವ ಪರಿಹಾರ ಸಾಮಗ್ರಿಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪೊಲೀಸ್ ಆಯುಕ್ತರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದ ನಿಯೋಗ ದೂರು ನೀಡಿದೆ. ಸರ್ಕಾರದ ಸೌಲಭ್ಯಗಳ ಮೇಲೆ ಬಿಜೆಪಿ ಮುಖಂಡರ ಭಾವಚಿತ್ರ ಅಂಟಿಸಿ ವಿತರಿಸಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುಬೇಕೆಂದು ಒತ್ತಾಯಿಸಿದೆ.