ಜಿಲ್ಲೆ

ಬೆಟ್ಟಿಂಗ್ ಜೂಜು- 2 ಲಕ್ಷ ರೂಪಾಯಿ, 2 ಮೊಬೈಲ್ ವಶಕ್ಕೆ; ಇಬ್ಬರ ಬಂಧನ

shastrimath

ಬೆಂಗಳೂರು: ಯುಎಇನಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿ ಬೆಟ್ಟಿಂಗ್ ಜೂಜಿನಲ್ಲಿ ನಿರತರಾಗಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಅವರಿಂದ 2 ಲಕ್ಷ ರೂಪಾಯಿ ಮತ್ತು 2 ಮೊಬೈಲ್​ಗಳನ್ನು ವಶಪಡಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿಗಳನ್ನು ಬೆಂಗಳೂರು ದಕ್ಷಿಣ, ಬಸವನಗುಡಿ ಚಿಕ್ಕಮಾವಳ್ಳಿಯ ದುಂಗರ್​ಚಂದ್​ ಜೈನ್ (49) ಮತ್ತು ನಗರತ್​ಪೇಟೆಯ ಕಿರಣ್​ ಜೈನ್​ (24) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕ್ರಿಕೆಟ್ ಪಂದ್ಯಾವಳಿ ಆರಂಭಕ್ಕೆ ಮೊದಲು ಸದರಿ ತಂಡಗಳ ಸೋಲು ಗೆಲುವಿನ ಬಗ್ಗೆ ಮೊಬೈಲ್ ಫೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಬೆಟ್ಟಿಂಗ್ ಜೂಜಾಟ ನಡೆಸುತ್ತಿದ್ದರು.

ಹಿಂದಿನ ಪಂದ್ಯಾವಳಿಯಲ್ಲಿ ಗೆದ್ದವರಿಗೆ ಹಣ ಕೊಡುವುದಕ್ಕಾಗಿ ಸೋತವರಿಂದ ಹಣ ಪಡೆಯಲು ಆರೋಪಿಗಳು ಹಲಸೂರುಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರತ್ ಪೇಟೆ ಕ್ರಾಸ್​ ಗೆ ಬಂದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.