ಚೀನಾ ಪಟಾಕಿ ಸಿಡಿಸಿದರೆ 2 ವರ್ಷ ಜೈಲು

China Firecracks
Published on

ಭೋಪಾಲ್: ಚೀನಾ ನಿರ್ವಿುತ ಪಟಾಕಿ ಮಾರಾಟ ಮತ್ತು ಖರೀದಿ ಮಾಡುವುದು ಸ್ಪೋಟಕಗಳ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವೆಂದು ಮಧ್ಯಪ್ರದೇಶ ಸರ್ಕಾರ ಎಚ್ಚರಿಸಿದೆ. ಈ ನಿಯಮ ಉಲ್ಲಂಘಿಸಿದರೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸುವುದಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.

ಗೃಹ ಸಚಿವ ನರೋತ್ತಮ್ ಮಿಶ್ರಾ ಅಧ್ಯಕ್ಷತೆಯಲ್ಲಿ ನಡೆದ ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲನೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಕ್ರಮ ಸುಡುಮದ್ದುಗಳ ಸಂಗ್ರಹ, ವಿತರಣೆ ಮತ್ತು ಮಾರಾಟ ಶಿಕ್ಷಾರ್ಹ ಅಪರಾಧ. ಅದು ಚೀನಿ ಸುಡುಮದ್ದುಗಳಿಗೂ ಅನ್ವಯವಾಗುತ್ತದೆ ಎಂದು ಗೃಹ ಖಾತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ಅರೋರಾ ಹೇಳಿದ್ದಾರೆ.

ಗೃಹ ಇಲಾಖೆ ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ಕಳಿಸಿದೆ. ಚೀನಾ ಸಹಿತ ಇತರ ದೇಶಗಳಿಂದ ಪಟಾಕಿ ಆಮದು ಮಾಡಿಕೊಳ್ಳುವುದು ಕಾನೂನು ಬಾಹಿರ ವಾಗುತ್ತದೆ. ದೀಪಾವಳಿ ಸಂದರ್ಭದಲ್ಲಿ ಪ್ಯಾಕೆಟ್​ಗಳ ಮೇಲೆ ದೇವರ ಚಿತ್ರ ಗಳಿರುವ ಪಟಾಕಿ ಬಳಸುವುದನ್ನು ಕೂಡ ಮಧ್ಯ ಪ್ರದೇಶ ಸರ್ಕಾರ ನಿಷೇಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net