ಜಿಲ್ಲೆ

ನ್ಯೂಯಾರ್ಕ್ ವರ್ಲ್ಡ್ ಸೈನ್ಸ್ ಸ್ಕಾಲರ್ಸ್‌ಗೆ ಉಳ್ಳಾಲದ ಬಾಲಕಿಗೆ ಆಹ್ವಾನ

ಉಳ್ಳಾಲ: ಅಮೆರಿಕಾದ ನ್ಯೂಯಾರ್ಕ್‌ನಲ್ಲಿ 2024ರ ಮೇ ನಲ್ಲಿ ನಡೆಯಲಿರುವ ವರ್ಲ್ಡ್ ಸೈನ್ಸ್ ಸ್ಕಾಲರ್ಸ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಲು ಮೊಗವೀರ ಸಮಾಜದ ಸಿಂಧೂರ(15) ಆಹ್ವಾನ ಪಡೆದಿದ್ದಾರೆ.

ಅಮೆರಿಕದ ಫ್ಯೂಚರ್ ಪೋರ್ಟ್ ಯೂತ್-2023 ಪ್ಲೇಗ್ ಚೆಕ್ ರಿಪಬ್ಲಿಕ್ 2023ನೇ ಸಾಲಿನಲ್ಲಿ ಆಯೋಜಿಸಿದ್ದ ‘ಮಾನವ ಸಮಾಜಕ್ಕೆ ವರದಾನವಾಗಲಿರುವ ಆವಿಷ್ಕಾರಗಳು’ ಎಂಬ ವಿಷಯದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಿಂಧೂರ ರಾಜ ಅವರು ಮಂಡಿಸಿದ್ದ ಆವಿಷ್ಕಾರಕ್ಕೆ ಪ್ರಥಮ ಬಹುಮಾನ 1.77ಲಕ್ಷ ರೂ. ನಗದು ದೊರೆತಿದೆ. ಬೆಂಗಳೂರಿನ ನ್ಯೂ ಹೊರೈಝನ್ ಪಬ್ಲಿಕ್ ಶಾಲೆಯಲ್ಲಿ ಕಲಿಯುತ್ತಿದ್ದು ಬಾಲ್ಯದಲ್ಲೇ ಚಿತ್ರಕಲೆಯೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿದ್ದು ಸ್ಮರಣಶಕ್ತಿ ಹೆಚ್ಚಾಗಿತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕುರಿತು ಆಸಕ್ತಿ ಹೊಂದಿದ್ದ ಅವರು, ಕರೊನಾ ಸಂದರ್ಭ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳ ಬಗ್ಗೆ ಅಧ್ಯಯನ ನಡೆಸಿದ್ದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ 19 ದೇಶಗಳ 33 ಆವಿಷ್ಕಾರಗಳನ್ನು ಕೊನೆಯ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು. ಇದರಲ್ಲಿ ಸಿಂಧೂರ ರಾಜ ಮಂಡಿಸಿದ್ದ ‘ಇಂಟೆಲಿಜೆಂಟ್ಸ್ ಮಾಡೆಲ್ ಸಿಬಿ ಫ್ಲೋ’ ಆವಿಷ್ಕಾರ ಪ್ರಥಮ ಸ್ಥಾನ ಪಡೆದಿದೆ. ಈ ಆವಿಷ್ಕಾರ ಮನುಷ್ಯನ ಮೆದುಳಿನ ಪ್ರಾಯವನ್ನು ಲೆಕ್ಕ ಹಾಕಿ ಡಿಮೆನ್ಸಿಯಾ, ಆಲ್ಝೈಮರ್ ಮುಂತಾದ ನ್ಯೂರೋ ಡಿ ಜನರೇಟಿವ್ ಕಾಯಿಲೆಗಳು ಬರುವ ಸಾಧ್ಯತೆಯನ್ನು ಅಂದಾಜಿಸುತ್ತದೆ.

2024ರ ಮೇ 29ರಿಂದ ಜೂನ್ 2ರವರೆಗೆ ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಫೆಸ್ಟಿವಲ್‌ನಲ್ಲಿ ಭಾಗವಹಿಸಲಿದ್ದು, 22 ದೇಶಗಳ ಒಟ್ಟು 52 ವಿದ್ಯಾರ್ಥಿಗಳಿಗೆ ಈ ಅವಕಾಶ ದೊರೆತಿದೆ. ಇವರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳ ಜತೆ ವಿಚಾರ ವಿನಿಮಯ ನಡೆಸಲಿದ್ದಾರೆ.

ಸಿಂಧೂರ ಅವರು ಯುರೋಪಿಯನ್ ಮೆಥಮ್ಯಾಟಿಕಲ್ ಸೊಸೈಟಿ ಮತ್ತು ಕ್ಯಾಂಪ್ ಯೆಲ್ಲೋ ನಡೆಸಿದ 2022ನೇ ಸಾಲಿನ ಅಂತಾರಾಷ್ಟ್ರೀಯ ಮೆಥಮ್ಯಾಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಸ್ಟೆಮ್ ಪೀಡಿಯಾ ಇವರು ನಡೆಸಿದ ‘ಕೋಡೆವಾರ್-2022’ ಇಂಟರ್‌ನ್ಯಾಶನಲ್ ಸ್ಪರ್ಧೆಯಲ್ಲಿ ಪೀಪಲ್ ಚಾಯ್ಸ ಅವಾರ್ಡ್ ಪಡೆದಿದ್ದಾರೆ. ಹಿರಿಯರ ಹಾಗೂ ಹೆತ್ತವರ ಮಾರ್ಗದರ್ಶನದಿಂದ ಯಶಸ್ಸು ಸಾಧ್ಯವಾಗಿದೆ.ಕರೊನಾ ಸಂದರ್ಭ ಆಳವಾಗಿ ಅಧ್ಯಯನ ನಡೆಸಿದ ಹಿನ್ನೆಲೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಚಾರ ತಿಳಿದು ಯಶಸ್ಸು ಸಾಧ್ಯವಾಗಿದೆ, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ಹೊಂದಿದ್ದು, ಹುಟ್ಟಿ ಬೆಳೆದ ಉಳ್ಳಾಲವನ್ನು ಮರೆಯದೇ ದೇಶದ ತಾಂತ್ರಿಕತೆ ಹಾಗೂ ವೈಜ್ಞಾನಿಕತೆಯ ಬಹುತೇಕ ಸವಾಲುಗಳಿಗೆ ಉತ್ತರವಾಗಲು ಪ್ರಯತ್ನಿಸುತ್ತೇನೆ ಎಂದು ಸಿಂಧೂರ ತಿಳಿಸಿದ್ದಾರೆ.