ಜಿಲ್ಲೆ

ಆರ್ಥಿಕ ಭದ್ರತೆಗೆ ಉಳಿತಾಯ ಅಗತ್ಯ : ಡಾ.ಬಾಲಾಜಿ ರಾವ್ ಡಿ.ಜಿ. ಸಲಹೆ

ಸೌಮ್ಯ ಆರ್

ಬೆಳ್ತಂಗಡಿ: ಎಚ್.ಡಿ.ಎಫ್.ಸಿ. ಬ್ಯಾಂಕ್‌ನ ಮ್ಯೂಚುವಲ್ ಫಂಡ್ ಎ.ಎಸ್.ಆರ್ ಫಿನ್‌ಟೆಕ್ ಸಹಯೋಗದೊಂದಿಗೆ ವಾಣಿಜ್ಯ ವಿಭಾಗದ ವತಿಯಿಂದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ನಡೆಯಿತು.

ಡಾ.ಬಾಲಾಜಿ ರಾವ್ ಡಿ.ಜಿ. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ಜನರು ಸಾಮಾನ್ಯವಾಗಿ ತಮ್ಮ ವ್ಯಾಪ್ತಿಗೆ ಬರುವ ಮತ್ತು ಹೆಸರುವಾಸಿಯಾಗಿರುವ ಬೆರಳೆಣಿಕೆಯ ಸಂಸ್ಥೆಗಳಲ್ಲಿ ಹೂಡಿಕೆ ಚಟುವಟಿಕೆಗಳನ್ನು ನಡೆಸುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಆದಾಯಕ್ಕಿಂತ ಖರ್ಚುಎಲ್ಲೆ ಮೀರಿ ಬೆಳೆಯುತ್ತಿದೆ. ಹಿಂದಿನ ಕಾಲದಲ್ಲಿ ಹೂಡಿಕೆ ಇಲ್ಲದೆ ಹೋದರೂ ಸಾಲದ ಹೊರೆ ಸ್ವಲ್ಪ ಮಾತ್ರ ಇರುತ್ತಿತ್ತು. ಈಗಿನ ಕಾಲ ಹಾಗಲ್ಲ. ಬೆಳವಣಿಗೆ, ಅಭಿವೃದ್ಧಿ ಎನ್ನುವ ಮಾತಿನ ಬೆನ್ನಲ್ಲೇ ಅನಿಶ್ಚಿತ ಭವಿಷ್ಯದ ಮೇಲೆ ವಿಪರೀತ ಸಾಲದ ಹೊರೆ ಇರುವುದು ಎಂದರು.

ಟಿ.ವಿ.ಶ್ರೀಧರ್ ರಾವ್ ಮಾತನಾಡಿ, ಎಳೆಯ ವಯಸ್ಸಿನಲ್ಲೇ ಹೂಡಿಕೆಯ ಬಗೆಗೆ ಆಸಕ್ತಿ ತುಂಬುವುದು ಶ್ಲಾಘನೀಯ ಕಾರ್ಯ. ಅನಿರ್ದಿಷ್ಟ ಭವಿಷ್ಯದಲ್ಲಿ ನಮ್ಮ ಭದ್ರತೆಗಾಗಿ ಉಳಿತಾಯ ಮನೋಭಾವ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎಂದರು.

ವಿದ್ಯಾಸಂಸ್ಥೆಯ ಪ್ರಭಾರ ಪ್ರಾಚಾರ್ಯ ಡಾ.ಪ್ರಜ್ವಲ್, ಆಡಳಿತಾಧಿಕಾರಿ ಕೀರ್ತಿನಿಧಿ ಜೈನ್, ವಾಣಿಜ್ಯ ವಿಭಾಗದ ಡೀನ್ ಸಂತೋಷ್ ಕೆ.ಕೆ, ವಿಭಾಗ ಮುಖ್ಯಸ್ಥ ಪ್ರಸನ್ನ, ಸಂಖ್ಯಾಶಾಸ್ತ್ರ ಉಪನ್ಯಾಸಕ ರವಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಭಿಷ್ಠ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಚೇತನಾ ವಂದಿಸಿದರು.

ಪ್ರಚಲಿತ ಮಾಹಿತಿ ಇರಲಿ

ಸಾಲದ ಹೊರೆಯಿಂದ ಭವಿಷ್ಯದಲ್ಲಿ ಹಣಕಾಸಿನ ಭದ್ರತೆ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಹೂಡಿಕೆಯ ಕಡೆಗೂ ಜನರು ಮನಸ್ಸು ಮಾಡುವಂತಾಗಬೇಕು. ಉತ್ತಮ ಹೂಡಿಕೆಯಿಂದ ಭವಿಷೈ ಸದೃಢವಾಗುತ್ತದೆ. ಹೂಡಿಕೆಗೆ ವೇದಿಕೆಗಳನ್ನೊದಗಿಸುವ ನಾನಾ ವಿಧದ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ಉಳಿತಾಯ ಕಾರ್ಯಕ್ರಮಗಳು, ಭೂಮಿ ಮತ್ತು ಆಭರಣ ಹೂಡಿಕೆ, ಸಂಸ್ಥೆಯ ಮೇಲಿನ ಹೂಡಿಕೆಗಳಿವೆ. ಇವೆಲ್ಲದರಲ್ಲಿ ಆಸಕ್ತಿ ಹೊಂದಿದ್ದು, ಪ್ರಚಲಿತ ಮಾಹಿತಿಯನ್ನು ಪಡೆಯುತ್ತಿರಬೇಕು. ಹೂಡಿಕೆ ಬಗೆಗೆ ಪ್ರಾದೇಶಿಕವಾಗಿ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನಮ್ಮ ಬ್ಯಾಂಕ್ ಬಹಳಷ್ಟು ಮುತುವರ್ಜಿಯನ್ನು ವಹಿಸಿಕೊಳ್ಳುತ್ತಿದೆ ಎಂದು ಡಾ.ಬಾಲಾಜಿ ರಾವ್ ಡಿ.ಜಿ. ತಿಳಿಸಿದರು.