ಕೊಟ್ಟೂರು: ಆಧುನಿಕ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಸುಗ್ಗಿ ಸಂಭ್ರಮವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ ಎಂದು ಇಸಿಒ ನಿಂಗಪ್ಪ ಹೇಳಿದರು.
ಇದನ್ನೂ ಓದಿ:ಕುಂಬಾರನಹಳ್ಳಿಯಲ್ಲಿ ಸುಗ್ಗಿಹಬ್ಬ ಸಂಭ್ರಮ
ತಾಲೂಕಿನ ಚಿರಿಬಿ ಸಹಿಪ್ರಾ ಶಾಲೆ ಹಾಗೂ ಪ್ರೌಢಶಾಲಾ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುಗ್ಗಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿತೇಂದ್ರ ಸ್ವಾಮಿ ಮಾತನಾಡಿ, ರೈತರು ಮೆಕ್ಕೆಜೋಳ, ಶೇಂಗಾ, ಕಬ್ಬು, ರೇಷ್ಮೆ ಹಾಗೂ ಇತರ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಯುವ ಪೀಳಿಗೆಗೆ ಸಿರಿಧಾನ್ಯಗಳ ಪರಿಚಯ ಇಲ್ಲವಾಗಿದೆ. ವಿದ್ಯಾರ್ಥಿಗಳಿಗೆ ಸುಗ್ಗಿ ಸಂಭ್ರಮದ ಮೂಲಕ ಧಾನ್ಯಗಳ ಮಹತ್ವ ತಿಳಿಸುವ ಕಾರ್ಯ ಶ್ಲಾಘನೀಯ ಎಂದರು.
ಕೃಷಿ ಸಲಕರಣೆಗಳಾದ ರಂಟೆ, ಕುಂಟೆ, ಜೋಡೆತ್ತುಗಳು ಹಾಗೂ ವೃತ್ತಿ ಕಸುಬುಗಳಾದ ಕುಂಬಾರಿಕೆ, ಕಮ್ಮಾರಿಕೆ, ಬಡಗಿ, ಶಿಲ್ಪ ಕೆತ್ತನೆ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳು ನೇಗಿಲು ಹೊಡೆಯುವ ರೈತ, 12ನೇ ಶತಮಾನದ ಶರಣರು, ಸಾಧು ಸಂತರ ವೇಷ ಭೂಷಣ ಧರಿಸಿ ಮನಸೆಳೆದರು. ಬೀಸುವುದು, ಕೇರುವುದು, ಮಜ್ಜಿಗೆ ಕಡಿಯುವುದು, ರೊಟ್ಟಿ ತಟ್ಟುವುದು, ತರಕಾರಿ ವ್ಯಾಪಾರ, ರಂಗೋಲಿ ಬಿಡುವುದು, ಮುತ್ತೈದೆಯರೆಲ್ಲ ಸೇರಿ ಬಳೆಗಾರನಿಂದ ಬಳೆ ಹಾಕಿಸಿಕೊಳ್ಳುವುದು, ಫಸಲು ಒಕ್ಕಾಣಿ ಸೇರಿ ಹಾಗೂ ವಿವಿಧ ವೇಷ ಭೂಷಣ ಧರಿಸಿ ಕೃಷಿ ಗೀತೆಗಳಿಗೆ ನೃತ್ಯ ಮಾಡಿದರು. ಗ್ರಾಮೀಣ ಮನೋರಂಜನೆಯ ಪಗಡೆ ಆಟ, ಹುಲಿ ಮನೆ ಆಟ, ಕವಡೆ ಆಟ ಹಾಗೂ ಗರಡಿ ಮನೆ ಸೇರಿ ಇತರೆ ಒಳಾಂಗಣ ಕ್ರೀಡೆ ಹಾಗೂ ನಿತ್ಯ ಬದುಕಿನ ಆಹಾರ ಪದ್ಧತಿಯನ್ನು ಪ್ರದರ್ಶಿಸಿದರು.
ಗ್ರಾಪಂ ಸದಸ್ಯ ಪಿ.ನಾಗರಾಜ, ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್, ಮುಖ್ಯಶಿಕ್ಷಕ ನಾಗೇಶ, ಪ್ರೌಢ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸಿದ್ದೇಶ್ ಇತರರಿದ್ದರು.