ಬೆಂಗಳೂರು: ಬದಲಾದ ಆಹಾರ ಪದ್ಧತಿಯಿಂದಾಗಿ ಆರೋಗ್ಯದಲ್ಲಿ ಆಗುತ್ತಿರುವ ತೊಂದರೆಗೆ ಪರಿಹಾರವೆಂಬಂತೆ ಸಿರಿಧಾನ್ಯಗಳ ಬಳಕೆ ಬಗ್ಗೆ ದೇಶ ವಿದೇಶಗಳಲ್ಲಿ ಆಸಕ್ತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಹಾಗು ಉತ್ತಮ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಪ್ರತಿವರ್ಷ ಸಿರಿಧಾನ್ಯ ಮೇಳವನ್ನು ಆಯೋಜಿಸುತ್ತಿದೆ. ಇದೇ ಗುರುವಾರ (ಜ.23) ದಿಂದು ಮೂರು ದಿನಗಳ ಕಾಲ ಅರಮನೆ ಮೈದಾನದ ತ್ರಿಪುರವಾಸಿನಿ ಆವರಣದಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ಆಯೋಜಿಸಲಾಗಿದೆ. ಎಂ.ಎಸ್.ರಾಮಯ್ಯ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ಸಿರಿಧಾನ್ಯಗಳ ಮಹತ್ವ, ಆಹಾರವಾಗಿ ಸ್ವೀಕರಿಸುವುದರ ಉಪಯುಕ್ತತೆ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮವನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಗೋಕುಲ ಶಿಕ್ಷಣ ಸಂಸ್ಥೆಯ ಚೇರ್ಮನ್ ಡಾ.ಎಂ.ಆರ್.ಜಯರಾಮ್ ಅಧ್ಯಕ್ಷತೆ ವಹಿಸಲಿದ್ದಾರೆ. ಐಎಎಸ್ ಅಧಿಕಾರಿಗಳಾದ ವಿ.ಅನ್ಬುಕುಮಾರ್, ವೈ.ಎಸ್.ಪಾಟೀಲ್, ಎಂ.ಆರ್.ಶ್ರೀನಿವಾಸಮೂರ್ತಿ, ಕೃಷಿ ಇಲಾಖೆ ನಿರ್ದೇಶಕ ಜಿ.ಟಿ.ಪುತ್ರ, ರಾಮಯ್ಯ ಯೂನಿವರ್ಸಿಟಿ ಕುಲಪತಿ ಕುಲದೀಪ್ ಕುಮಾರ್ ರೈನಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಅಂತರಾಷ್ಟ್ರೀಯ ಸಿರಿಧಾನ್ಯ ಮೇಳದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ನಮ್ಮ ಚಿತ್ತ ಸಿರಿಧಾನ್ಯದತ್ತ, ಆರೋಗ್ಯಕ್ಕಾಗಿ ಓಟ’ ಎಂಬ ಹೆಸರಿನಲ್ಲಿ ಭಾನುವಾರ ಬೆಳಗ್ಗೆ 6 ಗಂಟೆಗೆ ಕಬ್ಬನ್ ಉದ್ಯಾನವನದಿಂದ ಸಿರಿಧಾನ್ಯ ಓಟ (ಮ್ಯಾರಥಾನ್) ಏರ್ಪಡಿಸಲಾಗಿದೆ.