ಜಿಲ್ಲೆ

15ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ : 7,000 ಮಂದಿ ಮಾನವ ಸರಪಳಿಗೆ ಸಿದ್ಧತೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಸೆ.15ರಂದು ನಡೆಯಲಿದ್ದು, ದ.ಕ. ಜಿಲ್ಲೆಯ ಹೆಜಮಾಡಿ ಟೋಲ್‌ಗೇಟ್‌ನಿಂದ ಸುಳ್ಯ ತಾಲೂಕಿನ ಸಂಪಾಜೆಯವರೆಗೆ ಮಾನವ ಸರಪಳಿ ರಚಿಸಲಾಗುತ್ತದೆ ಎಂದು ತಹಸೀಲ್ದಾರ್ ಪ್ರದೀಪ್ ಕುರುಡೇಕರ್ ತಿಳಿಸಿದರು.

ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ನಡೆದ ಮೂಡುಬಿದಿರೆ, ಮೂಲ್ಕಿ ತಾಲೂಕು ವ್ಯಾಪ್ತಿಯ ಸರ್ಕಾರಿ ಇಲಾಖೆ, ಶಿಕ್ಷಣ, ಸಾಮಾಜಿಕ, ಸಾರ್ವಜನಿಕ ಸಂಘಟನೆಗಳ ವಿಶೇಷ ಸಭೆಯಲ್ಲಿ ಮಾತನಾಡಿದರು.

ಮೂಡುಬಿದಿರೆ- ಮೂಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಬೆಳಗ್ಗೆ 9ಕ್ಕೆ ಹೆಜಮಾಡಿ ಟೋಲ್‌ಗೇಟ್‌ನಿಂದ ಮಾನವ ಸರಪಳಿ ಆರಂಭವಾಗಲಿದ್ದು, ಹತ್ತಿರದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಇಲಾಖಾಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಕೈಜೋಡಿಸಲಿರುವರು. ಮುಂದೆ ಸಾಗುವ ಸರಪಳಿಯಲ್ಲಿ ಯಾವ ಸಂಸ್ಥೆಯವರು, ಇಲಾಖೆಯವರು ಎಲ್ಲಿ ಸೇರಿಕೊಳ್ಳಬೇಕು ಎಂಬ ಮಾಹಿತಿಯನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ ಎಂದರು.

ಉಭಯ ತಾಲೂಕುಗಳಿಂದ ಸುಮಾರು 7,000 ಮಂದಿ ಕಲೆತು, ಮೂಲ್ಕಿ ಗಡಿ ಪ್ರದೇಶ ಪಾವಂಜೆಯವರೆಗಿನ 8.5 ಕಿ.ಮೀ. ಉದ್ದದ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ದಿನವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದರು.

ಒಂದೂವರೆ ತಾಸು ನಡೆಯಲಿರುವ ಈ ಮಾನವ ಸರಪಳಿಯಲ್ಲಿ ಪಾಲ್ಗೊಳ್ಳುವವರಿಗಾಗಿ ಅಲ್ಲಲ್ಲಿ ಲಘು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಮೂಲ್ಕಿ ನಗರ ಪಂಚಾಯಿತಿ ಮುಖ್ಯಾಧಿಕಾರಿ ನಿಯೋಜನೆಯಲ್ಲಿ, ಮೊದಲ 700 ಮೀ. ವ್ಯಾಪ್ತಿಯವರೆಗೆ ಬಪ್ಪನಾಡು ವೆಂಕಟಗಿರಿ ಅಪಾರ್ಟ್‌ಮೆಂಟ್, ಬಳಿಕದ 700 ಮೀ. ಹಂತದಲ್ಲಿ ಕಾರ್ನಾಡು ಎಕ್ಸ್‌ಪ್ರೆಸ್ ಬಸ್ ನಿಲ್ದಾಣದಲ್ಲಿ, ಮುಂದೆ ಕ್ರಮವಾಗಿ ಕಾರ್ನಾಡು ಬೈಪಾಸ್, ಹೊನ್ನಕಟ್ಟೆ ಪೆಟ್ರೋಲ್ ಬಂಕ್, ಕೊಲ್ನಾಡು ಬಸ್ ನಿಲ್ದಾಣದಲ್ಲಿ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಿಯೋಜನೆಯಲ್ಲಿ ಪಡುಪಣಂಬೂರು ನ್ಯಾಚುರಲ್ ಗ್ರಾನೈಟ್ ಬಿಲ್ಡಿಂಗ್, ಬಿಲ್ಲವ ಭವನ, ಹಳೆಯಂಗಡಿ ಪೂಜಾ ಹೋಟೆಲ್ ಬಳಿ, ಪಾವಂಜೆ ದೇವಸ್ಥಾನ ಆವರಣ ಮತ್ತು ಪಾವಂಜೆ ಸೇತುವೆ ಬಳಿಯ ವಾಣಿ ಕಾಲೇಜಿನಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ಶುದ್ಧ ನೀರನ್ನು ಒದಗಿಸಲಾಗುವುದು ಎಂದರು.

ಮಂಗಳೂರು ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯಕ್ತ ಗೋವಿಂದ ನಾಯಕ್, ತಹಸೀಲ್ದಾರ್ ಕಿರಣ್ ಎಸ್., ಮೂಡುಬಿದಿರೆ- ಮೂಲ್ಕಿ ತಾ.ಪಂ. ಕಾ.ನಿ.ಅಧಿಕಾರಿ ಕುಸುಮಾಧರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುರೇಶ ಅಡಿಗ, ಮೂಡುಬಿದಿರೆ ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ., ಬಿಇಒ ವಿರೂಪಾಕ್ಷಪ್ಪ ಸಹಿತ ವಿವಿಧ ಸ್ಥಳೀಯ ಆಡಳಿತ ಪ್ರಮುಖರು, ಇಲಾಖಾಧಿಕಾರಿಗಳು, ಶಿಕ್ಷಣ ಮತ್ತು ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.