ಹೊಸಪೇಟೆ: ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಮಹಿಳೆಯರ ಮೇಲಾಗುವ ಲೈಂಗಿಕ ಕಿರುಕುಳ ತಡೆಗಟ್ಟುವ ಉದ್ದೇಶದಿಂದ ಆಂತರಿಕ ದೂರು ಸಮಿತಿ ರಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.
ಇದನ್ನೂ ಓದಿ:ಕಾನ್ಸ್ಟೆಬಲ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆಂತರಿಕ ದೂರು ಸಮಿತಿ ರಚನಾ ಸಭೆಯಲ್ಲಿ ಮಾತನಾಡಿದರು. ಸಂಘಟಿತ, ಅಸಂಘಟಿತ, ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ 10ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಪುರುಷರು ಕೆಲಸ ಮಾಡುತ್ತಿದ್ದರೆ ಅಂಥ ಸಂಸ್ಥೆಗಳಲ್ಲಿ ಕಚೇರಿಯ ಮುಖ್ಯಸ್ಥರು ಆಂತರಿಕ ದೂರು ಸಮಿತಿ ರಚನೆ ಮಾಡಬೇಕು. ಸಮಿತಿಯಲ್ಲಿ ಉದ್ಯೋಗಸ್ಥ ಮಹಿಳೆ ಅಧ್ಯಕ್ಷೆ ಮತ್ತು ಇಬ್ಬರು ಸದಸ್ಯರನ್ನು ಕಡ್ಡಾಯವಾಗಿ ನೇಮಿಸಬೇಕು. ಪ್ರತಿ 3 ವರ್ಷಗಳಿಗೊಮ್ಮೆ ಸಮಿತಿಯನ್ನು ಮರು ರಚಿಸಬೇಕು ಎಂದು ಸೂಚಿಸಿದರು.
ಕೆಲಸದ ವೇಳೆ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರು ನೋಂದಾಯಿಸಲು ಏಕಗವಾಕ್ಷಿ ಪದ್ಧತಿ ಸಹಕಾರಿಯಾಗಿದೆ. ಕಚೇರಿಯಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳೆಯರು ಈ ಪೋರ್ಟಲ್ ಮೂಲಕ ದೂರು ದಾಖಲಿಸಬಹುದು. ಬಾಕ್ಸ್‌ಗೆ ದೂರು ಸಲ್ಲಿಸಿದ ನಂತರ ನೇರವಾಗಿ ಕ್ರಮ ಕೈಗೊಳ್ಳಲು ನ್ಯಾಯ ವ್ಯಾಪ್ತಿಯನ್ನು ಹೊಂದಿದ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು ಎಂದು ಡಿಸಿ ತಿಳಿಸಿದರು.