ಬೆಳಗಾವಿ: ಬಿರಿಯಾನಿ ಜಾಹೀರಾತಿನಲ್ಲಿ ಸಾಧು-ಸಂತರಿಗೆ ಅವಮಾನ ಆಗುವ ರೀತಿಯಲ್ಲಿ ಪ್ರಕಟಿಸಿರುವ ಹೊಟೇಲ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ಬೆಳಗಾವಿಯ ನಿಯಾಜ್ ಹೋಟೆಲ್ ಮಾಲೀಕ ನಿಯಾಜ್ ಸೌದಾಗರ್ ಬಂಧಿತ ಉದ್ಯಮಿ.
ಬಿರಿಯಾನಿ ಕುರಿತಂತೆ ನಿಯಾಜ್ ಹೋಟೆಲ್ನಿಂದ ಬುಧವಾರವಷ್ಟೇ ಜಾಹೀರಾತೊಂದನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಸಾಧು-ಸಂತರಿಗೆ ಅವಮಾನ ಮಾಡಲಾಗಿದೆ ಎಂದು ಹಿಂದುಪರ ಹೋರಾಟಗಾರರು ಆರೋಪಿಸಿದ್ದರು. ಬಿರಿಯಾನಿ ಜಾಹೀರಾತಿನ ಮೂಲಕ ಸಾಧು-ಸಂತರನ್ನು ಅವಮಾನಿಸಿರುವ ಹೋಟೆಲ್ ಮಾಲೀಕರ ವಿರುದ್ಧ ಕ್ರಮಜರುಗಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ಹಿಂದುಪರ ಕಾರ್ಯಕರ್ತರ ದೂರಿನ ಮೇರೆಗೆ ಮಾರ್ಕೆಟ್ ಠಾಣೆ ಪೊಲೀಸರು ನಿಯಾಜ್ ಹೋಟೆಲ್ ಮಾಲೀಕರನ್ನು ವಶಕ್ಕೆ ಪಡೆದಿದ್ದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಸಾಧು-ಸಂತರ ಅವಮಾನದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದೂ ಹಿಂದುಪರ ಹೋರಾಟಗಾರರು ಆಗ್ರಹಿಸಿದ್ದರು.