ಗುರುಪುರ: ಇಲ್ಲಿನ ಗೋಳಿದಡಿಗುತ್ತಿನ ಮನೆಗೆ ಸಮೀಪ ಫಲ್ಗುಣಿ ನದಿ ತಟದಲ್ಲಿ ತಲೆ ಎತ್ತಿರುವ ಶ್ರೀ ಗುರು ಮಹಾಕಾಲೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿವಿಧಾನವು ಮೇ 15ರಿಂದ 17ರವರೆಗೆ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೋಮವಾರ ಗೋಳಿದಡಿಗುತ್ತಿನ ಮನೆಯಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆ ಹಾಗೂ ಕಾರ್ಯಾಲಯ ಉದ್ಘಾಟನೆ ಜರುಗಿತು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದಕ್ಷಿಣ ಕನ್ನಡ ಜಿಲ್ಲಾ ನಿಕಟಪೂರ್ವ ಸಂಸದ, ಸೊನ್ನುಕಟ್ಟೆಯಲ್ಲಿ ದೀಪ ಬೆಳಗಿಸಿದರು. ಬಳಿಕ ಗುತ್ತಿನ ಮನೆಯಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಮಾತನಾಡಿದರು.
ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ರೂಪುರೇಷೆ ಬಗ್ಗೆ ದಿವಾಕರ ಸಾಮಾನಿ ವಾಹಿತಿ ನೀಡಿ, ಸಮಯ ಪರಿಪಾಲನೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವುದರೊಂದಿಗೆ ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಯುವ ನಿಟ್ಟಿನಲ್ಲಿ ಒಟ್ಟು 22 ಸಮಿತಿ ರಚಿಸಲಾಗುವುದು. ಸುತ್ತಲಿನ ಗ್ರಾಮಗಳು ಒಳಗೊಳ್ಳುವಂತೆ ಗುರುಪುರ ಪ್ರಖಂಡ ಸಮಿತಿ ರಚಿಸಲಾಗುವುದು. ಮೇ 17ರಂದು ಧಾರ್ಮಿಕ ಸಭೆಯೊಂದಿಗೆ ಮೂರು ದಿನಗಳ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ತೆರೆ ಬೀಳಲಿದೆ ಎಂದರು.
ಗೋಳಿದಡಿಗುತ್ತಿನ ಯಜವಾನ, ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಬಿಲ್ಲವ ಸೇವಾ ಸಮಾಜ ಗುರುಪುರ ಅಧ್ಯಕ್ಷ ಮಹಾಬಲ ಅಮೀನ್, ಚಂದ್ರಹಾಸ ಕಾವ, ರಾಜಕುಮಾರ್ ಶೆಟ್ಟಿ, ದಿವ್ಯಾ ಆರ್.ಶೆಟ್ಟಿ, ಪುರಂದರ ಮಲ್ಲಿ ದೋಣಿಂಜೆಗುತ್ತು, ನವೀನ್ ಶೆಟ್ಟಿ ಪೆರ್ವಾರಗುತ್ತು, ಸುಧಾಕರ ಶೆಟ್ಟಿ ದೋಣಿಂಜೆಗುತ್ತು, ಹರೀಶ್ ಶೆಟ್ಟಿ ಮೂಡುಶೆಡ್ಡೆ, ಸುಧೀರ್ ಕಾಮತ್, ನಾಗೇಶ್ ಕೊಟ್ಟಾರಿ ಮತ್ತಿತರರು ಸಲಹೆ ಸೂಚನೆ ನೀಡಿದರು.
ಹೋಟೆಲ್ ಉದ್ಯಮಿ ರವಿ ಭಟ್, ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುವಾರ್ ಕಟೀಲ್, ಉದ್ಯಮಿ ಯಾದವ್ ಕೋಟ್ಯಾನ್ ಪೆರ್ಮುದೆ, ಎ.ಜೆ. ವೈದ್ಯಕೀಯ ಸಂಸ್ಥೆ ಉಪಾಧ್ಯಕ್ಷ ಪ್ರಶಾಂತ್ ಜೆ.ಶೆಟ್ಟಿ, ದುಬೈ ಅಶೋಕ್ ಶೆಟ್ಟಿ ನಂದಿಕೂರು, ಗಡಿಕಾರರ ಪತ್ನಿ ಉಷಾ ವರ್ಧವಾನ ಶೆಟ್ಟಿ ಹಾಗೂ ಗುತ್ತಿನ ಚಾವಡಿ ಮಿತ್ರರು ಉಪಸ್ಥಿತರಿದ್ದರು. ಸುನೀಲಾ ಪಿ. ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ನವೀನ್ ಶೆಟ್ಟಿ ಎಡ್ಮೆವಾರ್ ವಂದಿಸಿದರು.
ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದರ ವಾರ್ಗದರ್ಶನ ಹಾಗೂ ಸಂಕಲ್ಪದಂತೆ ಲೋಕಕಲ್ಯಾಣ ನಿಮಿತ್ತ ಫಲ್ಗುಣಿ ತಟದಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಎನ್ನಲಾದ 22 ಅಡಿ ಎತ್ತರ ಪದ್ಮಪೀಠದ ಮೇಲೆ 22 ಅಡಿ ಎತ್ತರದ ಶ್ರೀ ಮಹಾಕಾಲೇಶ್ವರ ಮೂರ್ತಿ ಪ್ರತಿಷ್ಠಾಪನೆ ಇದಾಗಿದೆ. ಮೂರ್ತಿ ಕೆತ್ತನೆ ಕೆಲಸ ಕೊನೆಯ ಹಂತದಲ್ಲಿದೆ. ದೈವ ಸಂಕಲ್ಪದಂತೆ ಕಾರ್ಯ ನಡೆಯುತ್ತಿದೆ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಗೋಳಿದಡಿಗುತ್ತಿನ ಯಜಮಾನ, ಗಡಿಕಾರ.