ಬೈಂದೂರು: ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿದ್ದು ಅಪಾಯಕಾರಿಯಾಗಿದೆ. ಈ ನಡುವೆ ಮಳೆ ಕೊಂಚ ಕ್ಷೀಣಿಸಿರುವುದರಿಂದ ತ್ರಾಸಿ-ಮರವಂತೆ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಗಂಗೊಳ್ಳಿ ಕರಾವಳಿ ಕಾವಲು ಪಡೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸ್ ನಿರೀಕ್ಷಕ ವಸಂತರಾಮ ಆಚಾರ್ ಮಾರ್ಗದರ್ಶನದಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಶುಕ್ರವಾರ ಸೂಚನಾ ಫಲಕಗಳನ್ನು ಹಾಗೂ ಬಲೆ ಹಾಕಿ ತಡೆಬೇಲಿ ನಿರ್ಮಿಸಲಾಗಿದೆ.
ಕುಂದಾಪುರ- ಬೈಂದೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 66ರ ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾದ ತ್ರಾಸಿ-ಮರವಂತೆ ಬೀಚ್‌ನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಗಂಗೊಳ್ಳಿ ಕರಾವಳಿ ಪೊಲೀಸ್ ಪಡೆಯ ಉಪ ನಿರೀಕ್ಷಕ ಬಾಬು ಪೂಜಾರಿ ನೇತೃತ್ವದಲ್ಲಿ ಠಾಣೆಯ ಸಿಬ್ಬಂದಿಗಳಾದ ಗೋಪಾಲ ಖಾರ್ವಿ, ಚೇತನ್ ಹಾಗೂ ಠಾಣೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿಯವರ ಶ್ರಮದಾನದೊಂದಿಗೆ ಬಲೆಯನ್ನು ಕಟ್ಟಿ ತಡೆಬೇಲಿ ನಿರ್ಮಿಸಿ ಹಾಗೂ ವಿವಿಧೆಡೆ ಕೆಂಪು ಪಟ್ಟಿ ಹಾಗೂ ಸೂಚನಾ ಫಲಕ ಅಳವಡಿಸಲಾಗಿದೆ. ತ್ರಾಸಿ ಮರವಂತೆ ಬೀಚಿನಲ್ಲಿ ಮಳೆಗಾಲ ಸಮಯದಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡಿ ಜೀವಕ್ಕೆ ಅಪಾಯ ತಂದುಕೊಳ್ಳದಂತೆ ಪೊಲೀಸರು ಎಚ್ಚರಿಸಿದ್ದಾರೆ.