ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮದ ಕರ್ವೇಲು ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ವಿದ್ಯುತ್ ಪರಿವರ್ತಕದ ಬೇಡಿಕೆ ಪುತ್ತೂರು ಶಾಸಕರ ಮುತುವರ್ಜಿಯಿಂದ ಈಡೇರಿದರೂ, ಪರಿವರ್ತಕ ಅಳವಡಿಕೆಗೆ ಸ್ಥಳಾವಕಾಶ ಲಭಿಸದೆ ಉಂಟಾಗಿದ್ದ ಗೊಂದಲವನ್ನು ಗುರುವಾರ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬಗೆಹರಿಸಲಾಯಿತು.
ಇರುವ ವಿದ್ಯುತ್ ಪರಿವರ್ತಕಕ್ಕೆ ಹೆಚ್ಚಿನ ಒತ್ತಡ ಲಭಿಸಿ ಗ್ರಾಮಸ್ಥರಿಗೆ ಲೋ ವೋಲ್ಟೇಜ್ ಸಮಸ್ಯೆ ಕಾಡುತ್ತಿದ್ದ ಕಾರಣ ಶಾಸಕರು ಹೆಚ್ಚುವರಿಯಾಗಿ ವಿದ್ಯುತ್ ಪರಿವರ್ತಕ ಮಂಜೂರುಗೊಳಿಸಿದ್ದರು. ಆದರೆ ಸ್ಥಳದ ಸಮೀಪದ ನಿವಾಸಿಗಳಿಂದ ಪ್ರತಿರೋಧ ವ್ಯಕ್ತವಾಗುತ್ತಿತ್ತು. ಕಡೆಗೆ ಸರ್ವಸಮ್ಮತ ಸ್ಥಳ ಗುರುತಿಸಲಾಯಿತಾದರೂ ಕಂಬ ಅಳವಡಿಸಲು ಮುಂದಾದಾಗ ಮತ್ತೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಪೊಲೀಸ್, ಮೆಸ್ಕಾಂ, ಸ್ಥಳೀಯ ಜನಪ್ರತಿನಿಧಿಗಳು, ಪಂಚಾಯಿತಿ ಅಧಿಕಾರಿಗಳು ನಿವಾಸಿಗರ ಮನವೊಲಿಸುವಲ್ಲಿ ಯಶಸ್ವಿಯಾದರು.
ಸಂಧಾನ ಮಾಡುವಲ್ಲಿ ಉಪ್ಪಿನಂಗಡಿ ಮೆಸ್ಕಾಂನ ಸಹಾಯಕ ಇಂಜಿನಿಯರ್ ನಿತಿನ್ ಕುಮಾರ್, ಪೊಲೀಸ್ ಅಧಿಕಾರಿಗಳು, 34 ನೆಕ್ಕಿಲಾಡಿ ಪಿಡಿಒ ಸತೀಶ್ ಡಿ.ಬಂಗೇರ, ಪ್ರಮುಖರಾದ ಅನಿ ಮಿನೇಜಸ್, ಅಬ್ದುಲ್ ಖಾದರ್ ಶ್ರಮಿಸಿದರು.