ಬೆಂಗಳೂರು: ರಾಮನ ಕುರಿತ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ...’ ಹಾಡು, ಇದೀಗ ಯೂಟ್ಯೂಬ್ನಲ್ಲಿ ಎರಡು ಕೋಟಿ ವೀಕ್ಷಣೆಯ ಸಮೀಪ ಆಗಮಿಸುತ್ತಿದೆ.
ಈ ಹಾಡು ಈಗಾಗಲೇ ತೆಲುಗು, ತಮಿಳು ತುಳು ಭಾಷೆಗಳಿಗೆ ಭಾಷಾಂತರವಾಗಿ, ಹರಿಕತೆ, ಭರತನಾಟ್ಯ, ಚಿತ್ರರಚನೆ, ಮರಳುಚಿತ್ರ.. ಹೀಗೆ ಹತ್ತು ಹಲವು ಕಲಾಪ್ರಕಾರಗಳಿಗೆ ಸ್ಪೂರ್ತಿಯಾದ ಈ ಗೀತೆಯನ್ನು ಹಾಡಿದವರು ನೂರಾರು ಗಾಯಕರು. ನಾಟಕಕಾರ, ಸಾಹಿತಿ, ಗಜಾನನ ಶರ್ಮಾ ಅವರ ಲೇಖನಿಯಲ್ಲಿ ಮೂಡಿಬಂದ ಈ ಹಾಡಿಗೆ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು, ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳೂ ದನಿಯಾಗಿದ್ದಾರೆ. ಈ ಹಾಡು ಸೃಷ್ಟಿಯಾದ ಹಿನ್ನೆಲೆ ಹೇಳಿಕೊಳ್ಳುವ ಗಜಾನನ ಶರ್ವ, ‘ಎಂಟು ವರ್ಷದ ಹಿಂದೆ ಚಾತುರ್ವಸ್ಯದ ಸಂದರ್ಭದಲ್ಲಿ ರಾಮನ ಕುರಿತು ಭಕ್ತಿಗೀತೆ ಬರೆಯಲು ರಾಘವೇಶ್ವರ ಶ್ರೀಗಳು ಸೂಚಿಸಿದ್ದರು. ಆಗ ಕೆಪಿಟಿಸಿಎಲ್ನಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದ ನಾನು ಕೆಲಸದೊತ್ತಡದಲ್ಲಿ ಹಾಡು ಬರೆಯುವುದನ್ನು ಮುಂದೂಡುತ್ತಲೇ ಬಂದಿದ್ದೆ. ಒಂದು ದಿನ ತರಬೇತಿ ನಿಮಿತ್ತ ಕೇರಳಕ್ಕೆ ತೆರಳಿದ ಸಂದರ್ಭದಲ್ಲಿ ಅಲ್ಲೇ ಇದ್ದ ‘ಏ ದಿಲ್ ಮಾಂಗೇ ಮೋರ್, ಏ ದಿಲ್ ಮಾಂಗೇ ರಾಮ್.’ ಎಂಬಂತೆ ಅನ್ನಿಸಿತು. ಆಗ ಹುಟ್ಟಿದ್ದೇ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ..’ ಎನ್ನುತ್ತಾರವರು.
ಸದ್ಯ ಈ ಹಾಡು ಭಕ್ತಿಗೀತೆ ಹೇಳಿಕೊಡುವ ಅನೇಕ ಭಕ್ತಿ ಸಂಗೀತ ಶಿಕ್ಷಕರು ಈ ಗೀತೆಯನ್ನು ಸಾಮೂಹಿಕವಾಗಿ ಹೇಳಿಕೊಟ್ಟಿದ್ದಾರೆ.ಅನೇಕ ದೇವಾಲಯಗಳಲ್ಲಿ ಇದು ಪ್ರಾರ್ಥನಾ ಪದ್ಯವಾಗಿ ಪ್ರತಿನಿತ್ಯ ಹಾಡಲ್ಪಡುತ್ತದೆ. ಈ ಹಾಡಿಗೆ ಗಜಾನನ ಅವರ ಪುತ್ರ ಸಾಕೇತ್ ಶರ್ಮಾ ರಾಗ ಸಂಯೋಜಿಸಿದ್ದು, ಸುಪ್ರಭಾ ಅವರ ಕಂಠದಲ್ಲಿ ಮೂಡಿ ಬಂದ ಈ ಹಾಡು ಯೂಟ್ಯೂಬ್ನಲ್ಲಿ 1ಕೋಟಿ 30 ಲಕ್ಷ ವೀಕ್ಷಣೆ ಕಂಡಿದೆ. ಇನ್ನುಳಿದಂತೆ ಬೇರೆ ಬೇರೆ ಚಾನೆಲ್ಗಳಲ್ಲಿ 70 ಲಕ್ಷ ವೀಕ್ಷಣೆಯತ್ತ ಸಾಗಿದೆ.