ಸುಳ್ಯ: ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಳಿಲ್ಲ, ಭಿನ್ನಮತ ಇಲ್ಲ, ಭಿನ್ನಾಭಿಪ್ರಾಯ ಮಾತ್ರ ಇವೆ ಅಷ್ಟೇ. ಮುಂದೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲರನ್ನು ಒಮ್ಮತದ ಮೂಲಕ ಕೊಂಡೊಯ್ಯಲು ಸಮರ್ಥರಾದವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು ಎಂದು ಕೆಪಿಸಿಸಿ ವೀಕ್ಷಕ ಎಂ.ನಾರಾಯಣ ಸ್ವಾಮಿ ಹೇಳಿದ್ದಾರೆ.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ವಿವಾದ ಸಂಬಂಧಿಸಿ ಸುಳ್ಯದಲ್ಲಿ ಮುಖಂಡರಿಂದ ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಮೂರು ದಿನಗಳ ಒಳಗಾಗಿ ವೀಕ್ಷಕರ ತಂಡ ವರದಿ ತಯಾರಿಸಿ ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದರು.
ಕೆಪಿಸಿಸಿ ವೀಕ್ಷಕರಾದ ಎಂ.ನಾರಾಯಣ ಸ್ವಾಮಿ, ಡಿಸಿಸಿ ಅಧ್ಯಕ್ಷ ಕೆ.ಹರೀಶ್‌ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಅವರು ತಾಲೂಕಿನ ರಾಜ್ಯ, ಜಿಲ್ಲಾ, ತಾಲೂಕು ಹಾಗು ಗ್ರಾಮ ಮಟ್ಟದ ನಾಯಕರ ಅಭಿಪ್ರಾಯ ಪಡೆದರು. ಬಳಿಕ ನಿಯೋಜಿತ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಆಕಾಂಕ್ಷಿಗಳಾದ ಸೋಮಶೇಖರ ಕೊಯಿಂಗಾಜೆ, ಸರಸ್ವತಿ ಕಾಮತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ಮುಖಂಡರಾದ ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್ ತೆಕ್ಕಿಲ್, ಜಿ.ಕೃಷ್ಣಪ್ಪ ಸೇರಿದಂತೆ ನಾಯಕರು, ಕಾರ್ಯಕರ್ತರು ಹಾಗು ಪ್ರಮುಖರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.