ಜಿಲ್ಲೆ

ಆಡಳಿತ ಪಕ್ಷದೊಳಗೆ ಜಟಾಪಟಿ

ಇಂದಿರಾ ಎನ್ ಕೆ

ಕೋಟ: ಸಾಲಿಗ್ರಾಮ ಪಪಂ ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿ ಸ್ಥಳ ಖರೀದಿ ಸಂಬಂಧಿಸಿ ಗುರುವಾರ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷ ಬಿಜೆಪಿಯಲ್ಲೇ ವಾಗ್ವಾದ ನಡೆಯಿತು.

ಆಡಳಿತ ಪಕ್ಷ ಸದಸ್ಯರಾದ ಸುಲತಾ ಎಸ್.ಹೆಗ್ಡೆ ಹಾಗೂ ರಾಜು ಪೂಜಾರಿ ಅವರ ನಡುವೆ ಚರ್ಚೆ ನಡೆಯಿತು. ಪಾರಂಪಳ್ಳಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಥಳ ಖರೀದಿ ಸಂಬಂಧಿಸಿ ಲೋಪದ ಬಗ್ಗೆ ಲೋಕಾಯುಕ್ತ ಕೋರ್ಟನಲ್ಲಿದೆ. ಅಲ್ಲದೆ ಸಿಆರ್‌ಜಡ್‌ನಲ್ಲೂ ಪ್ರಕರಣ ಇರುವುದರಿಂದ ಅದರ ಅಭಿವೃದ್ಧಿ ವಿಚಾರವಾಗಿ ಯೋಚನೆ ಬೇಡ ಎಂದು ಆಡಳಿತ ಪಕ್ಷದ ಸುಲತಾ ಹೆಗ್ಡೆ ಚರ್ಚೆ ಇಟ್ಟರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರಾಜು ಪೂಜಾರಿ ಹಳೇ ವಿಚಾರದಲ್ಲೇ ತರ್ಕ ಸರಿಯಲ್ಲ, ಘಟಕ ಅಭಿವೃದ್ಧಿ ಕುರಿತಂತೆ ಮುಂದಡಿ ಇರಿಸುವ ಬಗ್ಗೆ ಮುಖ್ಯಾಧಿಕಾರಿಯಲ್ಲಿ ತಿಳಿಸಿದರು. ಈ ಕುರಿತು ಆಡಳಿತ ಪಕ್ಷದೊಳಗೆ ವಾಕ್ ಸಮರ ನಡೆಯಿತು.

ಟೋಲ್ ಗೇಟ್ ಉಸ್ತುವಾರಿ ಇಂಗ್ಲೆಂಡ್ ಮೂಲದ ಕೆ.ಕೆ.ಆರ್ ಕಂಪನಿ ವಹಿಸಿಕೊಂಡಿದೆ. ಪಪಂ ತೆರಿಗೆ ಪಾವತಿಯಾಗುತ್ತಿದೆಯಾ ಎಂದು ಸದಸ್ಯ ಶ್ಯಾಮಸುಂದರ್ ನಾಯರಿ ಮುಖ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು. ಈ ಬಗ್ಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಪಾರಂಪಳ್ಳಿ ವಾರ್ಡ್ ಸದಸ್ಯೆ ಅನುಸೂಯಾ ಹೇರ್ಳೆ ಅವರನ್ನು ಅಭಿನಂದಿಸಲಾಯಿತು. ಬೀದಿನಾಯಿಗಳ ಹಾವಳಿ ಕುರಿತಂತೆ ಸದಸ್ಯ ಶ್ಯಾಮಸುಂದರ್ ನಾಯರಿ ಸಭೆ ಗಮನಕ್ಕೆ ತಂದರು. ಮುಖ್ಯಾಧಿಕಾರಿ ಉತ್ತರಿಸಿ ಬೀದಿ ನಾಯಿ ಸಾಕಣೆ ಸಂಬಂಧಿಸಿದ ಸ್ಥಳ ಗುರುತು ಹಾಗೂ ಸಂತಾನ ಶಕ್ತಿಹರಣ ಕ್ರಮದ ಬಗ್ಗೆ ಮಾಹಿತಿ ನೀಡಿದರು. 2025-26ನೇ ಸಾಲಿನ ಆಯವ್ಯಯ ಪತ್ರ ಮಂಡಿಸಲಾಯಿತು. ಅಧ್ಯಕ್ಷೆ ಸುಕನ್ಯಾ ಜಗದೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಇದ್ದರು.

ನೋಟಿಸ್ ಜಾರಿಗೊಳಿಸಿ

ಕಾಳಿಂಗ ಹೊಳ್ಳ ಮನೆಯ ರಸ್ತೆ ಅಭಿವೃದ್ಧಿ ಕುರಿತಂತೆ ಲೋಕಾಯುಕ್ತ ಕೋರ್ಟ್‌ನಿಂದ ಪಪಂಗೆ ನಿರ್ದೇಶನ ಬಂದಿದ್ದು, ಪಪಂ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮುಖ್ಯಾಧಿಕಾರಿ ಅಜೇಯ್ ಹೇಳಿದರು. ಲೋಕಾಯುಕ್ತ ಕಚೇರಿಂದ ಆದೇಶಿದ ಮಾತ್ರಕ್ಕೆ ಪಪಂ ಅನುದಾನದಡಿ ಕಾಳಿಂಗ ಹೊಳ್ಳ ಅಭಿವೃದ್ಧಿಗೊಳಿಸಿದರೆ ಇನ್ನುಳಿದ ಭಾಗಗಳ ಕಥೆ ಏನು ಈ ಬಗ್ಗೆ ಲೋಕಾಯುಕ್ತರಿಗೆ ಪಪಂ ಮನವರಿಕೆ ನೋಟಿಸ್ ಜಾರಿಗೊಳಿಸಿ ಎಂದು ಸಭೆ ಆಗ್ರಹಿಸಿತು.

ಸಾಲಿಗ್ರಾಮದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸ್ಥಳ ಗುರುತಿಸುವ ಸಂಬಂಧಿಸಿದಂತೆ ಕ್ರಮ ಕೈಗೊಂಡ ಬಗ್ಗೆ ವಿಪಕ್ಷ ಸದಸ್ಯ ಪುನೀತ್ ಪೂಜಾರಿ ಪ್ರಶ್ನಿಸಿದರು. ಸ್ಥಳದ ಅಭಾವ ಇರುವುದು ಗಮನಕ್ಕೆ ಬಂದಿದೆ. ಕಾಲಾವಕಾಶ ಪಡೆದು ನಿರ್ಧಾರ ಕೈಗೊಳ್ಳುವುದಾಗಿ ಅಜೇಯ್ ಭಂಡಾರ್ಕರ್ ಉತ್ತರಿಸಿದರು.