ಜಿಲ್ಲೆ

ಒಂದೆರಡು ತಿಂಗಳಲ್ಲಿ ಇಂದಿರಾ ಕಿಟ್: ಆಹಾರ ಇಲಾಖೆ ಸಿದ್ಧತೆ

ಬೆಂಗಳೂರು:‘ಅನ್ನಭಾಗ್ಯ’ ಯೋಜನೆಯಡಿ ಅಕ್ಕಿ ಬದಲು ಪೋಷಕಾಂಶ ಪದಾರ್ಥ ಹೊಂದಿರುವ ‘ಇಂದಿರಾ ಕಿಟ್’ ಕಾರ್ಯಕ್ರಮ 1-2 ತಿಂಗಳಲ್ಲಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.

ಯೋಜನೆ ಅನುಷ್ಠಾನ ಪ್ರಕ್ರಿಯೆ ಶುರುವಾಗಿದ್ದು, ತೊಗರಿಬೇಳೆ, ಹೆಸರುಕಾಳು, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಖರೀದಿಗಾಗಿ ಪ್ರತ್ಯೇಕ ಟೆಂಡರ್ ಕರೆಯುವುದು, ಖರೀದಿಸಿದ ಪದಾರ್ಥವನ್ನು ಪ್ರತ್ಯೇಕವಾಗಿ ಪ್ಯಾಕಿಂಗ್ ಮಾಡುವುದು ಹಾಗೂ ಗೋಡೌನ್‌ನಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಿಟ್ ಸರಬರಾಜು ಮಾಡಲು ಖಾಸಗಿ ಏಜೆನ್ಸಿಗೆ ಹೊಣೆ ವಹಿಸುವುದು ಇತ್ಯಾದಿ ಕಾರ್ಯಚಟುವಟಿಕೆ ಬಗ್ಗೆ ಈಗಾಗಲೇ ಇಲಾಖೆ ರೂಪುರೇಷೆ ಸಿದ್ಧಪಡಿಸಿಕೊಂಡಿದೆ.

ಅಕ್ಕಿ ಬದಲು ನಗದು ವರ್ಗಾವಣೆ ವ್ಯವಸ್ಥೆಯನ್ನು ಸರ್ಕಾರ, 2023ರ ಜು.10ರಿಂದ ಜಾರಿಗೆ ತಂದಿತ್ತು. 2023ರ ಜು.10ರಿಂದ 2025ರ ಜನವರಿವರೆಗೆ ಫಲಾನುಭವಿಗಳ ಖಾತೆಗೆ ಡಿಬಿಟಿ ಮುಖೇನ ಹಣ ಹಾಕಲಾಗುತ್ತಿತ್ತು. ಆದರೆ, ಕಡಿಮೆ ದರಕ್ಕೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿದ್ದ ಕಾರಣ ಕಳೆದ ಫೆಬ್ರವರಿಯಿಂದ ಯೋಜನೆಯಡಿ ಬಿಪಿಎಲ್ ಪ್ರತಿ ಸದಸ್ಯನಿಗೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ.

ಯೋಜನೆಯಡಿ ಕಾರ್ಡ್‌ಗಳಿಗೆ ಅಕ್ಕಿ ವಿತರಿಸಲು ಸರ್ಕಾರಕ್ಕೆ ವಾರ್ಷಿಕ 6,430 ಕೋಟಿ ರೂ. ಬೇಕಾಗುತ್ತದೆ. ಕಿಟ್ ವಿತರಣೆಗೆ 6,119 ಕೋಟಿ ರೂ. ಖರ್ಚು ಬರಲಿದೆ. ಇದರಿಂದ ಬೊಕ್ಕಸಕ್ಕೆ 250 ರಿಂದ 300 ಕೋಟಿ ರೂ.ವರೆಗೆ ಉಳಿತಾಯವಾಗಲಿದೆ.

ಕಿಟ್‌ನಿಂದ ಹಲವು ಅನುಕೂಲ?

*ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಇಂದಿರಾ ಕಿಟ್ ಹಂಚಿಕೆ

* ಕಿಟ್‌ನಲ್ಲಿ ತಲಾ 1 ಕೆಜಿ ತೊಗರಿಬೇಳೆ, ಹೆಸರುಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಇರಲಿದೆ

* ಒಬ್ಬರು ಅಥವಾ ಇಬ್ಬರು ಸದಸ್ಯರಿರುವ ಕಾರ್ಡ್‌ಗೆ ತಲಾ ಅರ್ಧ ಕೆಜಿ 2.5 ಕೆಜಿ, 3-4 ಜನರಿದ್ದರೆ 5 ಕೆಜಿ, ಐದಕ್ಕಿಂತ ಹೆಚ್ಚು ಸದಸ್ಯರಿದ್ದರೆ ತಲಾ 1.5 ಕೆಜಿಯಂತೆ 7.5 ಕೆಜಿ ಆಹಾರಧಾನ್ಯಗಳ ಕಿಟ್ ವಿತರಿಸಲಾಗುತ್ತದೆ

* ಕಿಟ್ ದುರ್ಬಳಕೆಗೆ ವಿಶೇಷ ಕ್ರಮ

* ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ವ್ಯಯಿಸುತ್ತಿದ್ದ ಹಣ ಉಳಿಕೆ

* ಪೋಷಕಾಂಶ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ

‘ಇಂದಿರಾ ಕಿಟ್’ ವಿತರಣೆಗೆ ಸಿದ್ಧರಾಗುವಂತೆ ಸರ್ಕಾರದಿಂದ ಸೂಚನೆ ಬಂದಿದೆ. ಪ್ರತಿ ಕಿಟ್‌ಗೆ 30 ರೂ. ಕಮಿಷನ್ ನೀಡಬೇಕು. ಅನ್ನಭಾಗ್ಯ ಅಕ್ಕಿ ವಿತರಣೆಯಿಂದ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಒಟ್ಟು 36 ಕೋಟಿ ರೂ.ಕಮಿಷನ್ ಬರುತ್ತಿದೆ. ಅಕ್ಕಿ ನಿಲ್ಲಿಸಿದರೆ ಕಿಟ್ ವಿತರಣೆಗೆ ಕಡ್ಡಾಯವಾಗಿ ಕಮಿಷನ್ ನೀಡಲೇಬೇಕು.

ಟಿ.ಕೃಷ್ಣಪ್ಪ, ಅಧ್ಯಕ್ಷ, ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ.