ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಹಬ್ಬ, ಮಕ್ಕಳ ಸಂತೆ ಕಾರ್ಯಕ್ರಮವನ್ನು ಲೋಕೇಶ ಖಾರ್ವಿ ಉದ್ಘಾಟಿಸಿದರು.  
ಜಿಲ್ಲೆ

ಚಟುವಟಿಕೆಯಿಂದ ವ್ಯವಹಾರಿಕ ಜ್ಞಾನ ವೃದ್ಧಿ

ಇಂದಿರಾ ಎನ್ ಕೆ

ಗಂಗೊಳ್ಳಿ: ಮಕ್ಕಳಿಗೆ ಪ್ರಸ್ತುತ ಔಪಚಾರಿಕ ಶಿಕ್ಷಣ ಮಾತ್ರ ದೊರೆಯುತ್ತಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನದ ಕೊರತೆ ಇದ್ದು, ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳು ಈ ನಿಟ್ಟಿನಲ್ಲಿ ಪೂರಕ ಎಂದು ಬೈಂದೂರು ವಲಯ ಕ್ಷೇತ್ರ ಸಮನ್ವಯಧಿಕಾರಿ ಪ್ರದೀಪ ಕುಮಾರ್ ಶೆಟ್ಟಿ ಹೇಳಿದರು.

ಬೈಂದೂರು ವಲಯದ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಮಕ್ಕಳ ಹಬ್ಬ, ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮರವಂತೆ ಗ್ರಾಪಂ ಅಧ್ಯಕ್ಷ ಲೋಕೇಶ ಖಾರ್ವಿ ಮಕ್ಕಳ ಸಂತೆ ಉದ್ಘಾಟಿಸಿದರು. ಗ್ರಾಪಂ ಮಾಜಿ ಸದಸ್ಯ ಗಣೇಶ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥ ಶ್ಯಾನುಭಾಗ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ನಾಗರಾಜ ಪಟಗಾರ್, ಶಿಕ್ಷಣ ಸಂಯೋಜಕ ಸತ್ಯನಾ ಕೊಡೇರಿ, ಸಾಧನಾ ಮರವಂತೆಯ ಕಾರ್ಯದರ್ಶಿ ದೇವಿದಾಸ ಶ್ಯಾನುಭಾಗ್, ವಿದ್ಯಾರ್ಥಿ ನಾಯಕ ಪ್ರತೀಕ್ ಜಿ. ಉಪಸ್ಥಿತರಿದ್ದರು.

ಮುಖ್ಯಶಿಕ್ಷಕ ಸೀತಾರಾಮ ಸ್ವಾಗತಿಸಿದರು. ವಿದ್ಯಾರ್ಥಿನಿ ಅದ್ವಿತಾ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ನಿರ್ಮಲಾ ಪೂಜಾರಿ ಮತ್ತು ಚಂದ್ರ ಕಾರ್ಯಕ್ರಮ ಸಂಯೋಜಿಸಿದ್ದರು. ವಿದ್ಯಾರ್ಥಿನಿಯರಾದ ಸಂಚಿತಾ ಕಾರ್ಯಕ್ರಮ ನಿರ್ವಹಿಸಿದರು. ಅನ್ವಿತಾ ವಂದಿಸಿದರು.

 ಸಂತೆ ವೈಶಿಷ್ಟೃಗಳು: ಶಾಲೆಯ ಮಕ್ಕಳು ಗುಂಪು ಕಟ್ಟಿಕೊಂಡು ಸ್ವಯಂ ಪ್ರಯತ್ನದಿಂದ ಸಂತೆಯಲ್ಲಿ ವ್ಯವಹಾರದ ಅಂಗಡಿಗಳನ್ನು ತೆರೆದಿದ್ದರು. ವೈವಿಧ್ಯಮಯ ಆಹಾರ ತಿನಿಸುಗಳು, ಹಣ್ಣು-ಹಂಪಲು, ಮನೆಯಲ್ಲಿ ಬೆಳೆದ ತರಕಾರಿಗಳು, ಪಾನೀಯಗಳು, ಬಟ್ಟೆ ಅಂಗಡಿ, ಸ್ಟೇಶನರಿ ಅಂಗಡಿಗಳು, ಮನೆಯ ಉಪಯೋಗದ ವಸ್ತುಗಳ ಅಂಗಡಿಗಳು, ಪೂಜಾ ಸಾಮಗ್ರಿಗಳ ಅಂಗಡಿಗಳು ವಿಶೇಷ ಆಕರ್ಪಣೆಯ ಕೇಂದ್ರಗಳಾಗಿದ್ದವು. ಹಾಗೆ ಸುಮ್ಮನೆ ಒಮ್ಮೆ ನೋಡಿಕೊಂಡು ಬರೋಣ ಎಂದು ಬಂದವರು ಕೂಡ ಮಕ್ಕಳಿಂದ ಉತ್ಪನ್ನಗಳನ್ನು ಖರೀದಿ ಮಾಡಿ ಸಂಭ್ರಮಿಸಿದರು.