ಟ್ರಾಲಿಂಗ್ ನಿಷೇಧದ ಹಿನ್ನೆಲೆಯಲ್ಲಿ ಕಾಸರಗೋಡು ಕಸಬಾಕಡಪ್ಪುರದಲ್ಲಿ ಮೀನುಗಾರರು ಗಾಳಹಾಕಿ ಮೀನು ಹಿಡಿಯುತ್ತಿದ್ದಾರೆ. 
ಜಿಲ್ಲೆ

ಗಗನಕ್ಕೇರಿದ ಮೀನಿನ ಬೆಲೆ : ಟ್ರಾಲಿಂಗ್ ನಿಷೇಧ ಕಾರಣ

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಕೇರಳಾದ್ಯಂತ ಮೀನುಗಾರಿಕೆ ನಿಷೇಧವಾಗಿದ್ದು, ಮೀನಿನ ಬೆಲೆ ಏಕಾಏಕಿ ಗಗನಕ್ಕೇರಿದೆ. ಬಡವರ ಮೀನು ಎಂದೇ ಖ್ಯಾತಿಗೆ ಪಾತ್ರವಾಗಿದ್ದ ಬೂತಾಯಿ ಬೆಲೆ 300 ರಿಂದ 350 ರೂ.ಗೆ ತಲುಪಿದೆ. ಆದರೆ ಮಾರುಕಟ್ಟೆಯಲ್ಲಿ ಬೂತಾಯಿ ಕಾಣುವುದೇ ಅಪರೂಪ.

ಧಾರಾಳವಾಗಿ ಲಭಿಸುತ್ತಿದ ಬಂಗುಡೆ ಮೀನಿಗೂ ಬರ ಎದುರಾಗಿದ್ದು ಸಣ್ಣ ಬಂಗುಡೆ ಮೀನಿಗೂ ಕಿಲೋ ಒಂದಕ್ಕೆ 300 ರಿಂದ 350 ರೂ. ಬೆಲೆಯಿದೆ. ಆದ್ದರಿಂದ ಬೆಳಗ್ಗಿನಿಂದಲೇ ಗ್ರಾಹಕರಿಂದ ತುಂಬಿ ತುಳುಕುತ್ತಿದ್ದ ಕಾಸರಗೋಡು ಮೀನಿನ ಮಾರುಕಟ್ಟೆ ಗ್ರಾಹಕರಿಲ್ಲದೆ ಬಣಗುಟ್ಟುತ್ತಿದೆ. ಮೀನು ಖರೀದಿಗೆ ಆಗಮಿಸುವ ಕೆಲವರು ಮೀನಿನ ಬೆಲೆ ಕೇಳಿ ಅರ್ಧಕ್ಕೇ ಸಪ್ಪೆ ಮೋರೆಯೊಂದಿಗೆ ತೆರಳುತ್ತಿದ್ದಾರೆ. ಕೆಲವರು ಕಾಲು ಕೆ.ಜಿ ಅಥವಾ ಅರ್ಧ ಕೆ.ಜಿ ಖರೀದಿಸಿ ತೆರಳುತ್ತಾರೆ.

ಬೂತಾಯಿ ಟ್ರೋಲ್

ಬೂತಾಯಿ ಧಾರಣೆ ಹೆಚ್ಚಳದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನತೆ ಟ್ರೋಲ್ ಮಾಡುತ್ತಿದ್ದಾರೆ. ‘ಬೂತಾಯಿ ನೀನು ಅಹಂಕಾರ ಪಡಬೇಡ. ಮಾಂಜಿ, ಅಂಜಲ್ ಸೇರಿದಂತೆ ಬೆಲೆಬಾಳುವ ಮೀನುಗಳ ಜತೆ ನೀನು ಈಜಾಡುತ್ತಿರಬಹುದು. ಆದರೆ ಅವರಂತೆ ಕಿಲೋಗೆ 350-400 ರೂ. ಲಭಿಸಬೇಕೆಂಬ ಹಟಮಾರಿತನ ಬೇಡ. ಎವ್‌ರಿ ಡಾಗ್ ಹ್ಯಾಸ್ ಎ ಡೇ ಎಂದು ಸಮಾಧಾನಪಟ್ಟುಕೊಳ್ಳುತ್ತೇನೆ. ನನ್ನಂತಹ ಬಡವನಿಂದ ನೀನು ದೂರಾಗಿ ಬಿಟ್ಟೆಯಲ್ಲ….’ ಎಂದು ಟ್ರೋಲ್ ಪೇಜ್‌ಗಳು ವಿನೋದವಾಡುತ್ತಿವೆ.

ಮೀನಿನ ಬೆಲೆಯೊಂದಿಗೆ ಕೋಳಿ, ಜತೆಗೆ ತರಕಾರಿ ಬೆಲೆಯೂ ಏರಿಕೆಯಾಗಿದ್ದು, ಗ್ರಾಹಕರ ಪಾಲಿಗೆ ಬೆಲೆಯೇರಿಕೆ ಬಿಸಿ ಎಲ್ಲ ವಲಯದಲ್ಲೂ ತಟ್ಟುತ್ತಿದೆ.

ಏಜೆಂಟ್‌ಗಳೂ ಕಾರಣ

ಬೂತಾಯಿ, ಬಂಗುಡೆ ಮೀನು ಧಾರಾಳ ಲಭಿಸುತ್ತಿದ್ದ ಸಮಯದಲ್ಲಿ ದರ ಕಡಿಮೆ ಇತ್ತು. ಆಗೆಲ್ಲಾ ಮೀನುಗಾರರೇ ಸಮುದ್ರದಿಂದ ಮೀನು ಹಿಡಿದು ತಂದು ಮಾರುಕಟ್ಟೆಯಲ್ಲಿ ಮಾರಾಟ ನಡೆಸುತ್ತಿದ್ದರು. ಇದರಿಂದ ಕೈಗೆಟಕುವ ಬೆಲೆಗೆ ಮೀನು ಲಭ್ಯವಾಗುತ್ತಿತ್ತು. ಇಂದು ಮೀನಿನ ಲಭ್ಯತೆಯಲ್ಲೂ ಕಡಿತವುಂಟಾಗಿದೆ. ಮಾರುಕಟ್ಟೆಗೆ ಮೀನು ಆಗಮಿಸುತ್ತಿದ್ದಂತೆ ಏಜೆಂಟ್‌ಗಳು ಮಧ್ಯಪ್ರವೇಶಿಸಿ ಮೀನಿನ ಬಹಿರಂಗ ಹರಾಜು ನಡೆಸುತ್ತಾರೆ. ತಮ್ಮಿಷ್ಟದಂತೆ ಮೀನಿಗೆ ಬೆಲೆ ಏರಿಸುತ್ತಾರೆ. ಇದೇ ಬೆಲೆಗೆ ಮಾರುಕಟ್ಟೆಯಲ್ಲಿ ಮೀನು ಮಾರಾಟ ನಡೆಸಲು ಮೀನು ಮಾರಾಟಗಾರರು ಒತ್ತಡಕ್ಕೊಳಗಾಗುತ್ತಿದ್ದಾರೆ!.