ಕುಂದಾಪುರ: ಕೊಲ್ಲೂರು, ವಂಡ್ಸೆ, ಶಂಕರನಾರಾಯಣ ಮಾರ್ಗದಲ್ಲಿ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಕೋಟೇಶ್ವರಕ್ಕೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಿದ ವಿದ್ಯಾರ್ಥಿಗಳು, ಶಂಕರನಾರಾಣ ಕಾಲೇಜಿಗೆ ಕೊಲ್ಲೂರು, ಇಡೂರು, ಚಿತ್ತೂರು, ವಂಡ್ಸೆ, ನೇರಳಕಟ್ಟೆ, ಅಂಪಾರು, ಬೈಂದೂರು ಸಹಿತ ಹಲವೆಡೆಯಿಂದ 150ಕ್ಕೂ ಅಧಿಕ ವಿದ್ಯಾರ್ಥಿಗಳು ತೆರಳುತ್ತಿದ್ದು, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲ. ಈ ಭಾಗದಲ್ಲಿ ಬೆಳಗ್ಗೆ ಒಂದು ಖಾಸಗಿ ಬಸ್ ಸಂಚರಿಸುತ್ತಿದ್ದು, ಸಂಜೆ 6 ಗಂಟೆ ಬಳಿಕ ಬಸ್‌ಗಳೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದು, ಶಂಕರನಾರಾಯಣ ಭಾಗದಲ್ಲಿ ಬೆಳಗ್ಗೆ, ಸಂಜೆ ಹೆಚ್ಚಿನ ಬಸ್‌ಗಳು ಸಂಚರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ವಿದ್ಯಾರ್ಥಿಗಳ ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವ ರಾಮಲಿಂಗಾ ರೆಡ್ಡಿ, ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಕೆಎಸ್‌ಆರ್‌ಟಿಸಿ ಮಂಗಳೂರು ಘಟಕದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಶೆಟ್ಟಿ ಅವರಿಗೆ ಸೂಚನೆ ನೀಡಿದರು.