ಜಿಲ್ಲೆ

ಪಲಿಮಾರು ಅಂಗನವಾಡಿ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಸರ್ಕಾರದ ಶಿಷ್ಟಾಚಾರ ಪಾಲನೆ ನೆಪದಲ್ಲಿ ಉಸ್ತುವಾರಿ ಸಚಿವರಿಗಾಗಿ ಕಾದು ಎರಡೆರಡು ಬಾರಿ ಉದ್ಘಾಟನೆ ಮುಂದೂಡಲ್ಪಟ್ಟಿದ್ದ ಪಲಿಮಾರು ಅಂಗನವಾಡಿ ಕಟ್ಟಡ ಕೊನೆಗೂ ಶಾಸಕರಿಂದ ಶುಕ್ರವಾರ ಉದ್ಘಾಟನೆಗೊಂಡಿತು. ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಎಲ್ಲೂರು ಗ್ರಾಮದ ಕುಂಜೂರು ಹಾಗೂ ಪಲಿಮಾರಿನ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶುಕ್ರವಾರ ದಿನಾಂಕ ನಿಗದಿಯಾಗಿತ್ತು. ಸಚಿವರ ಕಾರ್ಯಕ್ರಮ ಪಟ್ಟಿಯಲ್ಲಿ ಕುಂಜೂರು ಅಂಗನವಾಡಿ ಉದ್ಘಾಟನೆ 2.45 ಮತ್ತು ಪಲಿಮಾರು ಅಂಗನವಾಡಿ ಉದ್ಘಾಟನೆ 3.30 ಸಮಯವನ್ನು ನಿಗದಿ ಮಾಡಲಾಗಿತ್ತು. ತರಾತುರಿಯಲ್ಲಿ ಕುಂಜೂರು ಅಂಗನವಾಡಿ ಕಟ್ಟಡ ಉದ್ಘಾಟಿಸಿದ ಸಚಿವೆ ಸಮಯದ ಕೊರತೆಯಿಂದ ಪಲಿಮಾರು ಕಾರ್ಯಕ್ರಮ ಕೈಬಿಟ್ಟು ನೇರ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಇತ್ತ ಸಚಿವೆ ಆಗಮನ ನಿರೀಕ್ಷೆಯಲ್ಲಿ ಕಾದು ಕುಳಿತ್ತಿದ್ದ ಇಲಾಖೆ ಅಧಿಕಾರಿಗಳು, ಪಲಿಮಾರು ಗ್ರಾಮಾಡಳಿತ ಹಾಗೂ ಗ್ರಾಮಸ್ಥರು ನಿರಾಸೆಗೊಳಗಾದರು.

ಶಾಸಕರಿಂದ ಲೋಕಾರ್ಪಣೆ

ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಕಾರ್ಯಕ್ರಮ ಪ್ರಥಮ ಪಟ್ಟಿಯಲ್ಲಿ ಕುಂಜೂರು ಹಾಗೂ ಪಲಿಮಾರು ಅಂಗನವಾಡಿ ಕೇಂದ್ರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವ ಉಲ್ಲೇಖ ಇತ್ತಾದರೂ, ಬಳಿಕ ಪರಿಷ್ಕರಿಸಿದ ಪಟ್ಟಿಯಲ್ಲಿ ಇದನ್ನು ಕೈಬಿಟ್ಟು ಬೇರೆ ಕಾರ್ಯಕ್ರಮಕ್ಕೆ ಸಮಯ ನಿಗದಿ ಮಾಡಲಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಕುಂಜೂರಿಗೆ ತೆರಳಿ ಅಲ್ಲಿಂದ ಪಲಿಮಾರಿಗೆ ಆಗಮಿಸಿದ ಶಾಸಕರಿಗೆ ಸಚಿವರ ಗೈರಿನಿಂದ ಅಂಗನವಾಡಿ ಕೇಂದ್ರ ಉದ್ಘಾಟಿಸುವ ಭಾಗ್ಯ ದೊರೆಯಿತು.

ಫ್ಲೆಕ್ಸ್ ಅಳವಡಿಕೆಯಲ್ಲಿ ಮೇಲಾಟ

ಅಂಗನವಾಡಿ ಕಟ್ಟಡ ಉದ್ಘಾಟನೆಗಾಗಿ ಬಿಜೆಪಿ ಬೆಂಬಲಿತ ಗ್ರಾಮಾಡಳಿತದಿಂದ ಉಸ್ತುವಾರಿ ಸಚಿವೆ ಹಾಗೂ ಶಾಸಕರ ಭಾವಚಿತ್ರವಿದ್ದ ಫ್ಲೆಕ್ಸ್ ಅಳವಡಿಸಿದ್ದರೆ, ಕಾಂಗ್ರೆಸ್ ಕಾರ್ಯಕರ್ತರಿಂದ ಸಚಿವೆ ಹಾಗೂ ಮಾಜಿ ಸಚಿವ ಸೊರಕೆ ಭಾವಚಿತ್ರ ಫ್ಲೆಕ್ಸ್ ಅಳವಡಿಸಿ ಮೇಲಾಟ ನಡೆಯಿತು. ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಗ್ರಾಪಂ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ತಹಸೀಲ್ದಾರ್ ಪ್ರತಿಭಾ ಆರ್., ತಾಪಂ ಇಒ ಜೇಮ್ಸ್ ಡಿಸಿಲ್ವ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶಾಮಲಾ, ಪಿಡಿಒ ಶಶಿಧರ ಆಚಾರ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನವೀನಚಂದ್ರ ಸುವರ್ಣ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಿರಣ್ ಮತ್ತಿತರರು ಉಪಸ್ಥಿತದ್ದರು.