ಜಿಲ್ಲೆ

ಭಾರತೀಯ ಜ್ಞಾನ ಹೊಟ್ಟೆ ತುಂಬಿಸುವ ವಿದ್ಯೆಯಲ್ಲ : ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಆಶೀರ್ವಚನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಇಂದಿನ ವಿದ್ಯೆ ಹೊಟ್ಟೆ ತುಂಬಿಸುವಂಥದ್ದು. ಆದರೆ ಭಾರತೀಯ ಜ್ಞಾನ ಹೊಟ್ಟೆ ತುಂಬಿಸುವ ವಿದ್ಯೆಯಲ್ಲ. ಜೀವನ ರೂಪಿಸುವ, ಜ್ಞಾನದ ಹೃದಯ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.

ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಭಾರತೀಯ ಜ್ಞಾನ ಪದ್ಧತಿ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದ ಆವಿಷ್ಕಾರ್ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಂದು ಯುಗದಲ್ಲೂ ಶಾಂತಿ ನೆಲೆಸುವುದಾದರೆ ಅದಕ್ಕೆ ಋಷಿ ಮಹರ್ಷಿಗಳು ಕಾರಣ. ನಮ್ಮ ಹಿಂದೆ ಭಾರತೀಯ ಜ್ಞಾನ ಪರಂಪರೆ ಶಕ್ತಿ ಇರುವುದು ನಮ್ಮ ಭಾಗ್ಯ. ಭಾರತೀಯ ಜ್ಞಾನ ಪರಂಪರೆ ಇಡೀ ವಿಶ್ವಕ್ಕೆ ಪಸರಿಸಿದ್ದರೂ ಪ್ರಸ್ತುತ ದಿನಗಳಲ್ಲಿ ನಷ್ಟದಲ್ಲಿದೆ. ನಮ್ಮ ಕೆಲವೊಂದು ವಿದ್ಯೆ ನಾಶವಾಗಿದ್ದರೆ, ಕೆಲವು ವಿನಾಶದ ಅಂಚಿನಲ್ಲದೆ. ಜ್ಯೋತಿಷ್ಯವೂ ಒಂದು ವಿಜ್ಞಾನ, ರಾಹುಕಾಲದಲ್ಲಿ ಎಲ್ಲವೂ ಸಿಗುತ್ತದೆ. ಸಮಾಪ್ತಿಗೊಂಡರೆ ಎಲ್ಲವೂ ನಷ್ಟವಾಗುತ್ತದೆ. ನನಗೂ 18ನೇ ವಯಸ್ಸಿನಲ್ಲಿ ರಾಹು ದಿಶೆಯಲ್ಲಿ ಎಲ್ಲವೂ ಸಿಕ್ಕಿತು. ಆದರೆ ರಾಹು ದಿಶೆ ಮುಗಿದ ಬಳಿಕ ಎಲ್ಲವೂ ತ್ಯಾಗ ಮಾಡುವ ಸನ್ಯಾಸತ್ವ ಸಿಕ್ಕಿತು. ಜ್ಯೋತಿಷ್ಯ ವ್ಯವಸ್ಥೆ ಸತ್ಯ ಎನ್ನುವುದಕ್ಕೆ ನನ್ನ ಜೀವನವೇ ಸಾಕ್ಷಿ ಎಂದರು.

ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಹರ್ಷ ಹಾಲಹಳ್ಳಿ, ಹಣಕಾಸು ಮತ್ತು ಯೋಜನಾ ನಿರ್ದೇಶಕ ರಾಜೇಂದ್ರ ಉಪಸ್ಥಿತರಿದ್ದರು.

ಉಪಕುಲಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಸ್ವಾಗತಿಸಿದರು. ಸಹ ಕುಲಾಧಿಪತಿ ಪ್ರೊ.ಎಂ.ಶಾಂತರಾಮ್ ಶೆಟ್ಟಿ ಮಾತನಾಡಿದರು. ಭಾರತೀಯ ಜ್ಞಾನ ಪದ್ಧತಿ ಕೇಂದ್ರ ನಿರ್ದೇಶಕ ಪ್ರೊ.ಸುಧೀರ್ ರಾಜ್ ವಂದಿಸಿದರು. ಡಾ.ಸಿ.ಎಸ್.ಶಾಸ್ತ್ರಿ ನಿರೂಪಿಸಿದರು.

ಇಂದಿನ ಭಾರತದಲ್ಲಿ ಭಾರತಕ್ಕಿಂತ, ಹಿಂದಿಯಲ್ಲಿ ಹಿಂದಿಗಿಂತ ಇತರ ದೇಶ, ಭಾಷೆ ಪ್ರಭಾವ ಹೆಚ್ಚಿದೆ. ಭಾರತೀಯ ಜ್ಞಾನ ಪರಂಪರೆಯಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತಿರುವ ದಿನಗಳಲ್ಲಿ ವಿವಿಧ ರಾಜ್ಯ, ದೇಶಗಳ ವಿದ್ಯಾರ್ಥಿಗಳನ್ನು ಹೊಂದಿರುವ ನಿಟ್ಟೆ ವಿ.ವಿ. ಘಟಕ ಆರಂಭಿಸಿದ್ದು, ಮುಂದಿನ ಪೀಳಿಗೆಗೆ ಭಾರತೀಯ ಪರಂಪರೆ ಪರಿಚಯಿಸುವ ಮೂಲಕ ವಿಶ್ವಕ್ಕೆ ಹೊಸ ಬೆಳಕು, ಶಕ್ತಿ ತೋರಿಸಲಿದೆ. ಶ್ರೀ ರಾಘವೇಂದ್ರ ಭಾರತೀ ಸ್ವಾಮೀಜಿ, ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ