ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸಮಾಜದಲ್ಲಿ ಅವಕಾಶಗಳ ಸರಮಾಲೆ ಸಿಗುವಂತಾಗಲು ಶಿಕ್ಷಣವೇ ಪ್ರಧಾನ ಅಸ್ತ್ರ. ವಿದ್ಯೆ ಎಂಬುದು ಯಾರು ಕದಿಯಲಾಗದ ಸಂಪತ್ತು. ವಾಣಿ ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡಿ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಾಣಿ ವಿದ್ಯಾಸಂಸ್ಥೆಗಳ ಆವರಣದಲ್ಲಿ ಬೆಳ್ತಂಗಡಿ ತಾಲೂಕು ಒಕ್ಕಲಿಗರ ಸೇವಾ ಸಂಘ ಹಾಗೂ ವಾಣಿ ವಿದ್ಯಾಸಂಸ್ಥೆಗಳ ಕಟ್ಟಡ ಹಾಗೂ ಸಭಾಭವನ ಲೋಕಾರ್ಪಣಾ ಸಮಾರಂಭದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ದೇಶದ ಆಸ್ತಿ ನಮ್ಮ ಸಂಸ್ಕೃತಿ. ಗೌಡರ ಯಾನೆ ಒಕ್ಕಲಿಗರ ಸಂಘದ ಮೂಲಕ ಆರಂಭಗೊಂಡ ವಾಣಿ ವಿದ್ಯಾಸಂಸ್ಥೆ ಕಡಿಮೆ ಶುಲ್ಕದೊಂದಿಗೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.
ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಮದ್ಜಗದ್ಗುರು ವಿಧುಶೇಖರ ಭಾರತಿ ಶ್ರೀಗಳು ಕಟ್ಟಡ ಹಾಗೂ ಸಭಾಭವನ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಧ್ಯಕ್ಷ ಪಿ.ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕಿಶೋರ್‌ಕುಮಾರ್ ಬೊಟ್ಯಾಡಿ, ಮಾಜಿ ಸದಸ್ಯ ಕೆ.ಹರೀಶ್‌ಕುಮಾರ್, ಜಯಾನಂದ ರೆಡ್ಡಿ, ಪಪಂ ಅಧ್ಯಕ್ಷ ಜಯಾನಂದ ಗೌಡ, ಶೇಖರ ಗೌಡ ದೇವಸ, ಡಾ.ಕೆ.ಚಿನ್ನಪ್ಪ ಗೌಡ, ಲೋಕಯ್ಯ ಗೌಡ, ಎಚ್.ಪದ್ಮಗೌಡ, ಕಿರಣ್‌ಚಂದ್ರ ಡಿ, ನಾರಾಯಣ ಬೇಗೂರು, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನಾರಾಯಣ ಗೌಡ ದೇವಸ, ಚಂದ್ರಕಾಂತ್ ನಿಡ್ಡಾಜೆ, ಗೀತಾ ರಾಮಣ್ಣ ಗೌಡ, ಸೀತಾರಾಮ ಕೆ. ಉಪಸ್ಥಿತರಿದ್ದರು.
ಶೃಂಗೇರಿ ಮಠದ ವತಿಯಿಂದ ವಿಧುಶೇಖರ ಶ್ರೀಗಳು ವಾಣಿ ವಿದ್ಯಾಸಂಸ್ಥೆಗೆ ಶಾರದೆಯ ಮೂರ್ತಿ ಹಸ್ತಾಂತರಿಸಿದರು. ಗೌಡರ ಯಾನೆ ಒಕ್ಕಲಿಗ ಸಮುದಾಯದಿಂದ ಶೃಂಗೇರಿ ಮಠಕ್ಕೆ ಹುಂಡಿ ಕಾಣಿಕೆ ಸಮರ್ಪಿಸಲಾಯಿತು. ಯುವರಾಜ ಅನಾರು ಸ್ವಾಗತಿಸಿದರು. ಮೋಹನ ಗೌಡ ಪ್ರಸ್ತಾವನೆಗೈದರು. ಗಣೇಶ್ ಗೌಡ ವಂದಿಸಿದರು. ಧಮೇರ್ಂದ್ರ ಕುಮಾರ್ ಹಾಗೂ ಮೀನಾಕ್ಷಿ ಎನ್. ಕಾರ್ಯಕ್ರಮ ನಿರೂಪಿಸಿದರು.
ಗಣ್ಯರಿಗೆ ಗೌರವಾರ್ಪಣೆ
ಗಣ್ಯರಾದ ಎಚ್.ಪದ್ಮಗೌಡ, ಪಿ.ಕುಶಾಲಪ್ಪ ಗೌಡ, ಜಿ. ಸೋಮೇಗೌಡ, ಡಿ.ಯದುಪತಿ ಗೌಡ, ಚಂದ್ರ ಕೊಲ್ಚಾರ್, ಲಕ್ಷ್ಮೀನಾರಾಯಣ ಕೆ, ಪ್ರಸಾದ್, ಪ್ರವೀಣ್ ಬಿ.ಕೆ, ರಮೇಶ್ ಪಣೆಜಾಲು ನರ್ಸರಿ, ಸಿಂಚನಾ, ದೀಕ್ಷಾ, ತುಷಾರ ಬಿ.ಎಸ್ ಅವರನ್ನು ಗೌರವಿಸಲಾಯಿತು.