ಬೆಳ್ತಂಗಡಿ: ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ, ಸಂಶೋಧನೆ, ಆವಿಷ್ಕಾರ, ನೂತನ ಯಂತ್ರೋಪಕರಣಗಳ ಬಳಕೆಯಿಂದ ರೋಗಿಗಳಿಗೆ ತ್ವರಿತ ಚಿಕಿತ್ಸೆ ಸಿಗುವಂತಾಗಿದೆ. ರೋಗಿಗಳನ್ನು ರಕ್ಷಿಸುವ ಶಕ್ತಿ ಆಸ್ಪತ್ರೆಗಳಿಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಶನಿವಾರ ಉಜಿರೆ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮದ ಅಂಗವಾಗಿ ವಿಸ್ತೃತ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶಾಸಕ ಹರೀಶ್ ಪೂಂಜ ರಜತ ಸಂಭ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬಂತೆ ಇಲ್ಲಿನ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಕೆ.ತಂಡದವರು ಸೇವೆ ನೀಡುತ್ತಿದ್ದಾರೆ. ಆತ್ಮೀಯ ರೀತಿಯಲ್ಲಿ ವರ್ತಿಸುವ ಇಲ್ಲಿನ ಸಿಬ್ಬಂದಿ ಪಂಚತಾರಾ ಹೋಟೆಲ್‌ನ ಸಿಬ್ಬಂದಿಗೆ ಸಮಾನರಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಪಂ ಮಟ್ಟದಲ್ಲಿ ಈ ರೀತಿ ಆರೋಗ್ಯ ಕೇಂದ್ರ ಇರುವುದು ಪ್ರೇರಣಾದಾಯಿ ಎಂದರು. ವಿ.ಪ.ಸದಸ್ಯ ಪ್ರತಾಪ ಸಿಂಹ ನಾಯಕ್ ತುರ್ತು ಚಿಕಿತ್ಸಾ ವಿಭಾಗ ಉದ್ಘಾಟಿಸಿ ಮಾತನಾಡಿ, ಬೆನಕ ಆಸ್ಪತ್ರೆಯಲ್ಲಿ ಪ್ರತಿಯೊಂದರಲ್ಲಿ ಸಂವೇದನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವೆಯ ಧ್ಯೇಯದಲ್ಲಿ ಎತ್ತರಕ್ಕೆ ಬೆಳೆದು ಆಸ್ಪತ್ರೆ ಕಟ್ಟಿದ್ದಾರೆ. ಕುಟುಂಬವೇ ಸೇವೆಯಲ್ಲಿದೆ. ಗ್ರಾಮಾಂತರ ಪ್ರದೇಶಕ್ಕೆ ವೈದ್ಯಕೀಯ ಸೇವೆ ಅತಿ ಮುಖ್ಯ ಎಂದರು. ಸೀತಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ನ್ಯಾಷನಲ್ ಹೆಲ್ತ್ ಮಿಷನ್ ನಿರ್ದೇಶಕ ಡಾ.ನವೀನ್ ಭಟ್, ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಡಾ.ನಮಿಷಾ ಭಟ್, ಡಾ.ಭಾರತಿ ಜಿ.ಕೆ., ಡಾ.ಅಂಕಿತಾ ಜಿ.ಭಟ್, ಡಾ.ಆದಿತ್ಯ ರಾವ್, ಡಾ.ರೋಹಿತ್ ಜಿ.ಭಟ್, ಡಾ.ನವ್ಯಾ, ಮಾಜಿ ಎಂಎಲ್‌ಸಿ ಕೆ.ಹರೀಶ್ ಕುಮಾರ್ ಉಪಸ್ಥಿತರಿದ್ದರು. ಆಸ್ಪತ್ರೆಯ ಪಿಆರ್‌ಒ ಎಸ್.ಜಿ.ಭಟ್ ಮತ್ತು ವಕೀಲ ಧನಂಜಯ್ ರಾವ್ ನಿರೂಪಿಸಿದರು. ಕುಟುಂಬದ ಪಾಲಿಗೆ ಮನೆಯಂತೆ ಆಸ್ಪತ್ರೆ ಎಂದರೆ ಅದು ನಮ್ಮ ಕುಟುಂಬಕ್ಕೆ ಮನೆಯಂತೆ. ಕುಟುಂಬ ಸದಸ್ಯರ ಪೂರ್ಣ ಬೆಂಬಲ ಆಸ್ಪತ್ರೆ ಅಭಿವೃದ್ಧಿಗೆ ಕಾರಣವಾಗಿದೆ. ರೋಗಿಗಳಿಗೆ ಸಂತೃಪ್ತಿ, ನಗುಮೊಗದ ಸೇವೆ ನೀಡಿದರೆ ಅವರ ಅರ್ಧ ಕಾಯಿಲೆ ಗುಣವಾದಂತೆ. ರೋಗಿಗಳ ಮನೋಸ್ಥಿತಿಗೆ ಅನುಗುಣವಾಗಿ ಆಸ್ಪತ್ರೆಯಲ್ಲಿ ಸೌಲಭ್ಯ ಅಳವಡಿಸಿಕೊಳ್ಳಲಾಗಿದೆ. ತ್ವರಿತ ಚಿಕಿತ್ಸೆಗೆ ಆಸ್ಪತ್ರೆಯ ಧ್ಯೇಯವಾಗಿದೆ ಎಂದು ಬೆನಕ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ್ಣ ಕೆ.ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗಳ ಬೇಡಿಕೆ ಹೆಚ್ಚುತ್ತಿದ್ದು, ಬೆನಕ ಆಸ್ಪತ್ರೆ ಇದಕ್ಕೆ ಉತ್ತಮವಾಗಿ ಸ್ಪಂದಿಸಿದೆ. ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ರಿಯಾಯಿತಿ ದರದ ಸೇವೆ ಸಿಗುವಂತಾಗಲಿ. ಬೆನಕ ಆಸ್ಪತ್ರೆ ಸೇವೆ, ರೋಗಿಗಳ ಕಾಳಜಿ, ವ್ಯವಸ್ಥೆಗಳು, ಪ್ರಶಂಸನೀಯ. ಬದುಕಿನಲ್ಲಿ ಬದಲಾವಣೆ ಆಗುತ್ತಿದ್ದು ಜನರ ಆಯುಷ್ಯ ಪ್ರಮಾಣ ಅಧಿಕವಾಗಲು ಆಸ್ಪತ್ರೆ ನೀಡುವ ಸೇವೆ ಪ್ರಾಮುಖ್ಯವಾದುದು. ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ https://www.vijayavani.net/foundation-stone-for-machina-health-centre