ಬದಿಯಡ್ಕ: ಸಂಸ್ಕೃತಿಯನ್ನು ಭದ್ರಗೊಳಿಸುವ, ಭಾವನಾವಲಯ ಉದ್ದೀಪಿಸುವ ನಿಟ್ಟಿನಲ್ಲಿ ಕಲೆ, ಸಾಹಿತ್ಯ ಬೆಂಬಲ ನೀಡುತ್ತದೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ, ಸಂಶೋಧನಾ ನಿರ್ದೇಶಕ ಡಾ.ರತ್ನಾಕರ ಮಲ್ಲಮೂಲೆ ಹೇಳಿದರು.
ಬಳ್ಳಪದವು ನಾರಾಯಣೀಯಂ ಸಂಗೀತ ಶಾಲೆ ವೀಣಾವಾದಿನಿಯಲ್ಲಿ ಗುರುವಾರ ಆರಂಭಗೊಂಡ ವೇದ ನಾದ ಯೋಗ ತರಂಗಿಣಿ ಕಾರ್ಯಕ್ರಮ ಹಾಗೂ ಸಂಗೀತ ಸಾಂಸ್ಕೃತಿಕ ಭವನ ಬಾಲರಾಮವರಮ್ ಉದ್ಘಾಟನೆ ಅಂಗವಾಗಿ ಬೆಳಗ್ಗೆ ನಡೆದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಸಾಹಿತಿ ರಾಜಶ್ರೀ ಟಿ.ರೈ ಪೆರ್ಲ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಿಗಳಾದ ನರಸಿಂಹ ಭಟ್ ಏತಡ್ಕ, ಸುಶೀಲಾ ಪದ್ಯಾಣ, ಜೋತ್ಸ್ನಾ ಕಡಂದೇಲು, ಸುಂದರ ಬಾರಡ್ಕ, ಅಶ್ವಿನಿ ಕೋಡಿಬೈಲು, ಸಂಧ್ಯಾಗೀತ ಭಾಯಾರು, ಸೌಮ್ಯಾ ಪ್ರವೀಣ್, ರೇಖಾ ಅಣಂಗೂರು, ಎಸ್.ಎನ್.ಭಟ್ ಸೈಪಂಗಲ್ಲು, ಸಂಧ್ಯಾ ಕೊರೆಕ್ಕಾನ, ಪ್ರಮೀಳಾ ಚುಳ್ಳಿಕ್ಕಾನ, ಅಮೃತ ಓಟೆಕ್ಕಾಡು, ಸುಶ್ಮಿತಾ ಗೋಸಾಡ, ಪುರುಷೋತ್ತಮ ಭಟ್ ಕೆ. ಕವನ ವಾಚಿಸಿದರು.
ಸಾಹಿತಿ ಡಾ.ವಸಂತಕುಮಾರ್ ಪೆರ್ಲ, ವೀಣಾವಾದಿನಿಯ ವಿದ್ವಾನ್ ಯೋಗೀಶ ಶರ್ಮಾ ಬಳ್ಳಪದವು, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಉಪಸ್ಥಿತರಿದ್ದರು. ವಿಷ್ಣು ಶರ್ಮ ಪ್ರಾರ್ಥನಾಗೀತೆ ಹಾಡಿದರು. ಯೋಗೀಶ ಶರ್ಮ ಸ್ವಾಗತಿಸಿ, ವಂದಿಸಿದರು.
ಬೆಳಗ್ಗೆ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ ನೇತೃತ್ವದಲ್ಲಿ ಗಣಪತಿ ಹವನ, ಲಕ್ಷಾರ್ಚನೆ ನಡೆಯಿತು. ಮಧ್ಯಾಹ್ನ ಉದ್ಘಾಟನಾ ಸಮಾರಂಭ ನಡೆಯಿತು.