ಕಾರ್ಕಳ: ಜ್ಞಾನಾರ್ಜನೆ ಜತೆಗೆ ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ ರೂಢಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಕರ್ಣಾಟಕ ಬ್ಯಾಂಕ್ ಮಾನವ ಸಂಪನ್ಮೂಲ ಇಲಾಖೆ ಉಪಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ಸಾಮಗ ಬಿ. ಹೇಳಿದರು.
ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹ ಸಂಸ್ಥಾಪಕ ಗಣಪತಿ ಭಟ್ ಕೆ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಸಂಸ್ಥಾಪಕ ಅಮೃತ್ ರೈ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಎನ್‌ಸಿಎಸ್ ಸ್ಥಾಪಕ ನಿತೇಶ್ ಶೆಟ್ಟಿ, ಪ್ರಧಾನ ಶಿಲ್ಪಿ ಸುನೀಲ್ ಕುಮಾರ್, ಹಿರ್ಗಾನ ಗ್ರಾಪಂ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಂಸ್ಥೆಯ ಸಪ್ತ ಸಂಸ್ಥಾಪಕರು ಉಪಸ್ಥಿತರಿದ್ದರು. ಬಳಿಕ ಕ್ರಿಯೇಟಿವ್ ಯಕ್ಷರಾಧನಂ ಹವ್ಯಾಸಿ ಕಲಾವಿದರಿಂದ ‘ವಿದ್ಯಾಮಾತೆ ಶ್ರೀ ಶಾರದೆ ಲೀಲಾಮಾನು ವಿಗ್ರಹ’ ಯಕ್ಷಗಾನ ಪ್ರಸಂಗ ನೆರವೇರಿತು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್.ಕೆ. ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಾಂಕಾ ತೀರ್ಥರಾಮ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ತ್ರೈಮಾಸಿಕ ಪತ್ರಿಕೆ ನಿನಾದ 10ನೇ ಸಂಚಿಕೆ ಹಾಗೂ ವಾರ್ಷಿಕ ಸಂಚಿಕೆ ಸಪ್ತಸ್ವರ ಬಿಡುಗಡೆಗೊಳಿಸಲಾಯಿತು. ಗೋಪಾಲಕೃಷ್ಣ ಸಾಮಗ ಅವರನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.