| ಅಶೋಕ ಶೆಟ್ಟರ ಬಾಗಲಕೋಟೆ
ಮೂರ್ನಾಲ್ಕು ಜನರ ವಯಸ್ಸು 20 ಮೀರಿದ್ದರೂ ದೈಹಿಕವಾಗಿ ಬೆಳವಣಿಗೆಯೇ ಆಗಿಲ್ಲ. ಇನ್ನು ಕೆಲವರಿಗೆ ಪ್ರಪಂಚದ ಅರಿವೇ ಇಲ್ಲ. ಕೆಲವರಿಗೆ ಊಟ, ನೀರಡಿಕೆ ಯಾವುದೂ ಗೊತ್ತಾಗಲ್ಲ. ಸಮಯ ನೋಡಿಕೊಂಡು ಮನೆಯವರೇ ಅವರಿಗೆ ಅನ್ನ, ಆಹಾರ, ನೀರು ಕೊಡಬೇಕು. ಇದು ಬಾಗಲಕೋಟೆ ತಾಲೂಕಿನ ಛಬ್ಬಿ ಗ್ರಾಮದ ಪರಿಸ್ಥಿತಿ.
ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರು ಅಂಗವಿಕಲರು, ಕುಬ್ಜರು, ಬುದ್ಧಿಮಾಂದ್ಯರು ಇದ್ದಾರೆ ಎನ್ನುವುದು ಆತಂಕ ಮೂಡಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಷ್ಟೊಂದು ಸಾಧನೆ ಮಾಡಿದ್ದರೂ ಗ್ರಾಮದಲ್ಲಿ ಇಷ್ಟೊಂದು ಮಕ್ಕಳು ಹುಟ್ಟಿನಿಂದಲೇ ನಾನಾ ಸಮಸ್ಯೆಯಿಂದ ಬಳಲುತ್ತಿರುವುದು ಏತಕ್ಕಾಗಿ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಬಡವರ ಮನೆಯಲ್ಲಿ ಹೆಚ್ಚು: ಗ್ರಾಮದಲ್ಲಿ 30ಕ್ಕೂ ಹೆಚ್ಚು ಜನರು ಈ ರೀತಿ ಸಮಸ್ಯೆಯಿಂದ ಬಳಲುತ್ತಿದ್ದು, ಇವರಲ್ಲಿ ಬಹುತೇಕರು ಕಡುಬಡ ಕುಟುಂಬದವರು. ಇವರ ಸ್ಥಿತಿ ಕೂಲಿ ಮಾಡಿದರಷ್ಟೇ ಊಟ ಎನ್ನುವಂತಿದ್ದು, ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿರುವುದು ಕನಸಿನ ಮಾತಾಗಿದೆ.
ಸೈಕಲ್ ಆದರೂ ಕೊಡಿಸಿ: ಗ್ರಾಮದ ಗುರುನಾಥ ತುಮ್ಮರಮಟ್ಟಿ ಎನ್ನುವ ಯುವಕನಿಗೆ ವಯಸ್ಸು 20 ದಾಟಿದ್ದರೂ ಸೋಂಟದ ಮೇಲಿನ ದೇಹ ಮಾತ್ರ ಬೆಳೆದಿದ್ದು, ಕೈ-ಕಾಲುಗಳು ಬೆಳವಣಿಗೆ ಆಗಿಲ್ಲ. ಶಾಲೆಗೆ ಹೋಗಿಲ್ಲವಾದರೂ ಆತನ ನೆನಪಿನ ಶಕ್ತಿ ಅಪಾರವಾಗಿದೆ. ತನ್ನ ಈ ಸ್ಥಿತಿಗಿಂತಲೂ ಕುಟುಂಬದ ಆರ್ಥಿಕ ಸಮಸ್ಯೆ ನೆನೆಸಿಕೊಂಡು ಸದಾ ಕಣ್ಣೀರು ಹಾಕುತ್ತಿರುತ್ತಾನೆ. ಸಹೋದರ, ಸಹೋದರಿಯರ ಮದುವೆಯಾಗಿ ಅಪ್ಪ ಮಾಡಿದ ಸಾಲ ಲಕ್ಷ ಲಕ್ಷ ರೂ. ಇದೆ. ಅದೇ ಚಿಂತೆಯಲ್ಲಿ ಅಪ್ಪ, ಅವ್ವ ಇದ್ದಾರೆ. ಅವರು ಸಾಲಮುಕ್ತರಾಗಬೇಕು. ಇದಕ್ಕೆ ಸರ್ಕಾರ ನಮಗೆ ಏನಾದರೂ ಸಹಾಯ ಮಾಡಬೇಕು. ಇನ್ನು ತಾನು ಸೇರಿ ಗ್ರಾಮದಲ್ಲಿ ಇರುವ ಅಂಗವೈಕಲ್ಯ ಇರುವ ಎಲ್ಲರಿಗೂ ಸರ್ಕಾರ ಅಂಗವಿಕಲರ ಸೈಕಲ್ ವಿತರಿಸಬೇಕು. ನಮಗೆ ಸದ್ಯ ಮಾಸಾಶನ ಬಿಟ್ಟರೆ ಬೇರೆ ಏನೂ ಇಲ್ಲ. ನಮ್ಮಂತವರು ಬದುಕುವುದು ಕಷ್ಟವಾಗಿದೆ ಅಂತ ಕಣ್ಣೀರು ಹಾಕಿದ್ದಾನೆ.
ಯಾಕ್ಹೀಗೆ ಗೊತ್ತಿಲ್ಲ: ಛಬ್ಬಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಹುಟ್ಟುತ್ತಲೇ ಈ ರೀತಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯಾಕಾಗಿ ಎನ್ನುವುದು ತಮಗೆ ಗೊತ್ತಾಗುತ್ತಿಲ್ಲ. ಛಬ್ಬಿ ಗ್ರಾಮದಲ್ಲಿ 30 ರಿಂದ 35 ಮಕ್ಕಳು ಇದ್ದರೆ ಇನ್ನು ಛಬ್ಬಿ ಗ್ರಾಮ ಬರುವ ಯಡಳ್ಳಿ ಗ್ರಾಪಂ ವ್ಯಾಪ್ತಿಯ ನಾಲ್ಕು ಗ್ರಾಮ ಸೇರಿ ಈ ಸಂಖ್ಯೆ 70ಕ್ಕಿಂತ ಹೆಚ್ಚಿದೆ. ಈ ಬಗ್ಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ತಜ್ಞರನ್ನು ಕರೆದುಕೊಂಡು ಬಂದು ತಪಾಸಣೆ ಮಾಡಿ, ಯಾಕಾಗಿ ಇಲ್ಲಿ ಸಮಸ್ಯೆ ಹೆಚ್ಚಾಗಿದೆ ಎನ್ನುವುದನ್ನು ಪತ್ತೆ ಮಾಡಬೇಕು. ಇದಕ್ಕೆ ಪರಿಹಾರ ಏನು ಎನ್ನುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಪರಶುರಾಮ ಸಾಳಗುಂದಿ.
ಒಬ್ಬರು ಮನೆಯಲ್ಲೇ ಇರಬೇಕು: ಅಂಗವೈಕಲ್ಯದಿಂದ ಬಳಲುತ್ತಿರುವ ಮಕ್ಕಳನ್ನು ಜೋಪಾನ ಮಾಡಲು ಮನೆಯಲ್ಲಿ ಒಬ್ಬರು ಇರಲೇಬೇಕಿದೆ. ಮೊದಲೆ ಬಡತನ, ಮನೆಯಲ್ಲಿ ಈ ರೀತಿ ಕಾಯಿಲೆಯಿಂದ ಬಳಲುವ ಮಗ. ಹಡದಿದ್ದೇವೆ ಎಂದ ಮೇಲೆ ಜೋಪಾನ ಮಾಡಬೇಕು. ಇತ್ತ ಹೊಟ್ಟೆ ತುಂಬಿಸಿಕೊಳ್ಳಲು ನಾವು ದುಡಿಯಲು ಹೋಗಬೇಕಿದೆ. ಹೀಗಾಗಿ ಸರದಿಯಲ್ಲಿ ಒಬ್ಬರು ಮನೆಯಲ್ಲಿ ಇದ್ದು ನೋಡಿಕೊಳ್ಳುತ್ತೇವೆ. ಹುಟ್ಟಿನಿಂದಲೇ ಈ ರೀತಿಯಲ್ಲಿ ಇದ್ದಾರೆ ಎಂಬುದು 20 ವರ್ಷ ವಯಸ್ಸಾದರೂ ದೈಹಿಕ ಬೆಳವಣಿಗೆ ಇಲ್ಲದ ಮಗನನ್ನು ಹೊತ್ತುಕೊಂಡೇ ಇರುವ ತಾಯಿ ನೀಲವ್ವ ತುಮ್ಮರಮಟ್ಟಿ ಹಾಗೂ 30 ವರ್ಷಗಳಿಂದಲೂ ಬುದ್ಧಿಮಾಂದ್ಯ ಮಗನನ್ನು ಜೋಪಾನ ಮಾಡುತ್ತಿರುವ ವಿಠ್ಠಲ ಮುಳಗುಂದ ಮಾತು.
ಸಾಮಾನ್ಯವಾಗಿ ಸಂಬಂಧಿಕರಲ್ಲಿ ಮದುವೆಗಳು ಆದಾಗ ಈ ರೀತಿ ಮಕ್ಕಳು ಹುಟ್ಟುವ ಸಾಧ್ಯತೆ ಇರುತ್ತದೆ. ಆದರೆ, ಛಬ್ಬಿ ಗ್ರಾಮದಲ್ಲಿ ಏನು ಸಮಸ್ಯೆ ಇರಬಹುದು ಎನ್ನುವ ನಿಖರ ಮಾಹಿತಿ ತಿಳಿಯಲು ಶೀಘ್ರದಲ್ಲೆ ತಜ್ಞರ ತಂಡವನ್ನು ಕಳುಹಿಸುತ್ತೇವೆ. ಅವರು ಅಲ್ಲಿ ಅಧ್ಯಯನ ಮಾಡಿ, ಅವರ ಆರೋಗ್ಯ ಪರೀಕ್ಷೆ ಬಳಿಕ ನೀಡುವ ವರದಿ ಅನ್ವಯ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
| ಡಾ. ಅನಂತ ದೇಸಾಯಿ ಡಿಎಚ್ಒ, ಬಾಗಲಕೋಟೆ