ಜಿಲ್ಲೆ

In charge Secretary ಸಚಿವರ ಮುನಿಸು: 1 ತಿಂಗಳಲ್ಲಿ ಉಸ್ತುವಾರಿ ಕಾರ್ಯದರ್ಶಿ ಬದಲು

Uttara Kannada - Subash Hegde

ಕಾರವಾರ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ(In charge Secretary) ಯನ್ನು  ಬದಲಾಯಿಸಲಾಗಿದೆ. ಹಾಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ರಿತೇಶ ಕುಮಾರ ಸಿಂಗ್ ಅವರನ್ನು ರಾಯಚೂರು ಜಿಲ್ಲೆಗೆ ವರ್ಗಾಯಿಸಲಾಗಿದೆ. ಕರ್ನಾಟಕ ಮಾಹಿತಿ ಆಯೋಗದ ಕಾರ್ಯದರ್ಶಿ ಸುಷಮಾ ಗೋಡಬೋಲೆ ಅವರನ್ನು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನೇಮಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್.ಕಲ್ಪನಾ ಅವರು ಆದೇಶ ಹೊರಡಿಸಿದ್ದಾರೆ.

In charge Secretary ಬದಲೇಕೆ..?

ಹಾಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ(In charge Secretary )ರಿತೇಶ ಕುಮಾರ ಸಿಂಗ್ ಅವರ ಬಗ್ಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು.

ಕಾರ್ಯದರ್ಶಿಗಳು ಜಿಲ್ಲೆಗೆ ಪ್ರಗತಿ ಪರಿಶೀಲನೆಗೆ ಬರುತ್ತಾರೋ ಅಥವಾ ಹೆದ್ದಾರಿ ಕಂಪನಿಗಳ ಜತೆ ಸೆಟ್ಟಿಂಗ್‌ಗೆ ಬರುತ್ತಾರೋ ಎಂದು ಪ್ರಶ್ನೆ ಮಾಡಿದ್ದರು. ಶಿರಸಿ-ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿಸಲು ಸ್ವತಃ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ಮಾಡಿ ಹಿಂದಿನ ಜಿಲ್ಲಾಧಿಕಾರಿ ಅವರಿಂದ ಆದೇಶ ಮಾಡಿಸಿದ್ದರು. ಅವ್ಯವಸ್ಥೆಯಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವಿಚಾರದಲ್ಲೂ ಅವರು ಐಆರ್‌ಬಿ ಕಂಪನಿಯ ಪರವಾಗಿ ನಡೆದಿದ್ದರು ಎಂಬುದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಆರೋಪವಾಗಿತ್ತು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ(In charge Secretary) ಅವರು ಜಿಲ್ಲಾ ಪಂಚಾಯಿತಿಯ ಆಡಳಿತಾಽಕಾರಿಯೂ ಆಗಿರಲಿದ್ದಾರೆ. ಅಲ್ಲದೇ, ಅವರು ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕು ಎಂಬ ನಿಯಮವಿದೆ.

ಅವರು ಯಾವ ನಿಯಮವನ್ನು ಪಾಲಿಸಿದ್ದಾರೆ ಎಂದು ಕೇಳಿ ಎಂದು ಮಾಧ್ಯಮಗಳ ಎದುರು ಅಸಮಾಧಾನ ಹೊರ ಹಾಕಿದ್ದರು.

ಈಗ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಯನ್ನು ಮಾತ್ರ ಬದಲು ಮಾಡಲಾಗಿದ್ದು, ಸಚಿವರ ಮುನಿಸೇ ಬದಲಾವಣೆಗೆ ಕಾರಣ ಎಂಬುದು ಖಚಿತವಾದಂತಾಗಿದೆ.

ಅಭಿವೃದ್ಧಿ ಕಾರ್ಯಕ್ರಮ ಜಾರಿ, ಅಹವಾಲುಗಳ ವಿಚಾರಣೆ, ಅನಿರೀಕ್ಷಿತ ತಪಾಸಣೆ ಮಾಡಿ ಸರ್ಕಾರಕ್ಕೆ ವರದಿ ಮಾಡಲು ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಮಟ್ಟದ ಹಿರಿಯ ಐಎಎಸ್ ಅಧಿಕಾರಿಗಳನ್ನು ಸರ್ಕಾರ ನೇಮಕ ಮಾಡುವ ರೂಢಿ ಮೊದಲಿನಿಂದಲೂ ಇದೆ. ಈಗ ಜಿಪಂ ಅಧ್ಯಕ್ಷರಿಲ್ಲದ ಕಾರಣ ಅವರೇ ಆಡಳಿತಾಧಿಕಾರಿಯಾಗಿರುವರು.