ಬಳ್ಳಾರಿಯಲ್ಲಿ ಜೈನ ಸಮಾಜದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಮುಖಂಡರಾದ ಉತ್ಸವಲಾಲ್ ಬಾಗ್ರೇಚಾ, ಕೇವಲಚಂದ್ ವಿನೈಕ್ಯ, ಕಮಲ್ ಛಾಜೆಡ್ ಇತರರಿದ್ದರು. 
ಜಿಲ್ಲೆ

ಬಳ್ಳಾರಿಯಲ್ಲಿ ಸಮಾಜದ ಮುಖಂಡರ ಪ್ರತಿಭಟನೆ

Gangavati - Desk - Veeresh S Ullagaddi

ಬಳ್ಳಾರಿ: ಚಿಕ್ಕೋಡಿಯ ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ್ ಹತ್ಯೆ ಖಂಡಿಸಿ ಜೈನ ಸಮಾಜ ಶುಕ್ರವಾರ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.


ಪಾರ್ಶ್ವನಾಥ ಜೈನ್ ಶ್ವೇತಾಂಬರ ಸಂಘದ ಜಿಲ್ಲಾಧ್ಯಕ್ಷ ಉತ್ಸವಲಾಲ್ ಬಾಗ್ರೇಚಾ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಅತ್ಯಂತ ನೀಚ ಕೃತ್ಯಕ್ಕೆ ಕೈಹಾಕಿದ್ದಲ್ಲದೇ ಜೈನ ಧರ್ಮದ ಮುನಿಯನ್ನು ಅತ್ಯಂತ ಹೀನಾಯವಾಗಿ ಹತ್ಯೆಗೈದಿರುವುದು ಹೃದಯವಿದ್ರಾವಕ ಘಟನೆ. ಈ ಪ್ರಕರಣದಲ್ಲಿ ಯಾರೇ ಭಾಗವಹಿಸಿದ್ದರೂ ಕಾನೂನು ರೀತಿಯಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕು. ರಾಜ್ಯದ ಸರ್ವಧರ್ಮಗಳ ಮಠ-ಮಾನ್ಯಗಳ ಸ್ವಾಮೀಜಿಗಳಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.


ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತ ಅತಿದೊಡ್ಡ ದೇಶವಾಗಿದೆ. ಕೃಷಿ ಪ್ರಧಾನ ರಾಷ್ಟ್ರ, ಎಲ್ಲ ಧರ್ಮಗಳು ಒಂದೇ ಎಂದು ಸಾರುವ ಅನೇಕ ಸಾಧು ಸಂತರು ನೆಲೆಸಿದ ರಾಷ್ಟ್ರ ಇದಾಗಿದೆ. ಇಂದಿಗೂ ಹಿಂಸೆ ತೊರೆದು ಅಹಿಂಸಾ ಮಾರ್ಗದಲ್ಲಿ ನಡೆಯಬೇಕೆಂಬ ಸದುದ್ದೇಶದಿಂದ ಸಾಧು, ಸಂತರು, ಗುರುಗಳು ಉಪದೇಶಗಳನ್ನು ದೇಶದ ಉದ್ದಗಲಕ್ಕೂ ಸಾರುತ್ತಿದ್ದಾರೆ. ಜೈನ ಮುನಿಗಳು ಪಾದಯಾತ್ರೆ ಮೂಲಕ ಮನೆ ಮನೆಗೂ ಭೇಟಿ ನೀಡಿ, ಭಿಕ್ಷಾಟನೆ ಮಾಡಿ, ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಪ್ರಚಾರ ಕೈಗೊಳ್ಳುವ ಜೈನಮುನಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ನೀಡಬೇಕೆಂದು ಮನವಿ ಮಾಡಿದರು.
ಶ್ರೀ ವರ್ಧಮಾನ್ ಸ್ಥಾನಲ್ ಜೈನ ಸಂಘದ ಅಧ್ಯಕ್ಷ ಕೇವಲಚಂದ್ ವಿನೈಕ್ಯ, ಶ್ರೀ ಜೈನ ಶ್ವೇತಾಂಬರ ತೇರಾಪಂತ್ ಸಭಾದ ಅಧ್ಯಕ್ಷ ಕಮಲ್ ಛಾಜೆಡ್ ಇತರರಿದ್ದರು.