ಜಿಲ್ಲೆ

ವಾಯುಭಾರ ಕುಸಿತ ಪರಿಣಾಮ:13ರಂದು 10 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಬೆಂಗಳೂರು:ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ರಾಜ್ಯದ ಹಲವೆಡೆ ಮುಂದಿನ 3 ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ಕೊಡಗು, ಕೋಲಾರ, ಮಂಡ್ಯ, ಮೈಸೂರು,ತುಮಕೂರು ಮತ್ತು ಚಿತ್ರದುರ್ಗದಲ್ಲಿ ಡಿ.13ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ. ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ,ವಿಜಯನಗರದಲ್ಲಿ ಡಿ.13ರಂದು ಗುಡುಗು ಸಹಿತ ವರ್ಷಧಾರೆಯಾದರೆ, ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಾಧಾರಣವಾಗಿ ಸುರಿಯಲಿದೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ.

10 ರಾಜ್ಯಗಳಲ್ಲಿ ಶೀತ ಅಲೆ:ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್​, ಮಧ್ಯಪ್ರದೇಶ, ರಾಜಸ್ಥಾನ ಸೇರಿ ದೇಶದ 10 ರಾಜ್ಯಗಳಲ್ಲಿ ಶೀತ ಅಲೆ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ಕೊಟ್ಟಿದೆ. ಶೀತ ಅಲೆ ಹಿನ್ನೆಲೆಯಲ್ಲಿ ರಾತ್ರಿ ಮತ್ತು ಮುಂಜಾನೆ ಮಂಜು ಕವಿದ ವಾತಾವರಣ ಇರಲಿದ್ದು, ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸುವಂತೆ ಸಲಹೆ ನೀಡಲಾಗಿದೆ. ಕರ್ನಾಟಕದಲ್ಲಿಯೂ ಚಳಿ ವಾತಾವರಣ ಕಾಣಿಸಿಕೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ತುಸು ಕುಸಿತವಾದ ಪರಿಣಾಮ ಥಂಡಿ ಇರಲಿದೆ. ಜತೆಗೆ, ತಣ್ಣನೆ ಗಾಳಿ ಸಹ ಬೀಸುತ್ತಿದೆ. ಬೆಳಗಾವಿ, ಕಲಬುರಗಿ, ಹಾವೇರಿ, ರಾಯಚೂರು, ದಾವಣಗೆರೆ, ಮೈಸೂರು, ಮಂಡ್ಯ, ವಿಜಯಪುರ, ಮಂಗಳೂರಿನಲ್ಲಿ ಬುಧವಾರ ಕನಿಷ್ಠ ತಾಪಮಾನದಲ್ಲಿ ಸರಾಸರಿ 3 ರಿಂದ 5 ಡಿ.ಸೆ.ಉಷ್ಣಾಂಶ ಇಳಿಮುಖವಾಗಿದೆ.

ಪ್ರಸ್ತುತ ಹವಾಮಾನ ಸ್ಥಿತಿಯನ್ನು ಅವಲೋಕಿಸಿದರೆ ಸೈಕ್ಲೋನ್​ ಉಂಟಾಗುವುದಿಲ್ಲ. ವಾಯುಭಾರ ಕುಸಿತದಿಂದ ದಣ ಕರ್ನಾಟಕದ ಬಹುತೇಕ ಭಾಗದ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉಳಿದೆಡೆ ಸಾಧಾರಣ ವರ್ಷಧಾರೆಯಾಗಲಿದೆ. ಕೇರಳ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ತಮಿಳುನಾಡು, ಪುದಿಚೇರಿ, ಅಂಡಮಾನ್​ ಮತ್ತು ನಿಕೋಬಾರ್​, ಲಕ್ಷದಿಪ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ.

| ಡಾ.ಶ್ರೀನಿವಾಸ ರೆಡ್ಡಿ. ಹವಾಮಾನ ತಜ್ಞ.