ಬೆಳ್ತಂಗಡಿ: ಎಲ್ಲ ರೀತಿಯ ಸೃಜನಶೀಲ ಬರವಣಿಗೆಗೆ ಕಲ್ಪನೆ ಅಡಿಪಾಯವಾಗಿದೆ. ಸೃಜನಶೀಲ ಬರವಣಿಗೆಯು ದೈನಂದಿನ ಒತ್ತಡ ನಿವಾರಣೆಗೆ ಪೂರಕ ಎಂದು ಉಜಿರೆ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.
ಗುರುವಾರ ಉಜಿರೆಯ ಶ್ರೀ ಧ.ಮಂ.ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ ಆಯೋಜಿಸಿದ ‘ಕಾಲ್ಪನಿಕ ಬರವಣಿಗೆ: ಅನುವಾದ ಮತ್ತು ಪ್ರದರ್ಶನ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುವಾದ ಸಾಂಸ್ಕೃತಿಕ ಸಾಮರಸ್ಯ ಬೆಸೆಯುವುದಲ್ಲದೆ ಜಾಗತೀಕರಣದ ಪ್ರಕ್ರಿಯೆಗೂ ವಿಶೇಷವಾಗಿ ಸಹಾಯ ಮಾಡುತ್ತದೆ ಎಂದರು.
ಎಸ್.ಡಿ.ಎಂ. ಕಾಲೇಜಿನ ಹಳೇ ವಿದ್ಯಾರ್ಥಿ, ಗೋವಾ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಪಾದ ಭಟ್ ಹಾಗೂ ಕುಮಟಾದ ಕಮಲ ಬಾಳಿಗ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಶ್ರೀಧರ ಬಳಗಾರ ಅವರನ್ನು ಸನ್ಮಾನಿಸಲಾಯಿತು.
ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ, ಕಾರ್ಯಕ್ರಮ ಸಂಯೋಜಕ ಸೂರ್ಯನಾರಾಯಣ ಭಟ್ ಹಾಗೂ ವಿವಿಧ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಜಾನನ ಆರ್.ಭಟ್ ಸ್ವಾಗತಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ಮಂಜುಶ್ರೀ ಆರ್. ವಂದಿಸಿದರು. ಶಿಕ್ಷಕರಾದ ವಿಘ್ನೇಶ್ ಐತಾಳ್ ಹಾಗೂ ಶುಭರಾಣಿ ನಿರೂಪಿಸಿದರು.