ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಸ್ಥಳ ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದ ಸಮೀಪದಲ್ಲಿ ಭಾನುವಾರ (ಅ.06) ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಗೋಪಿನಾಥಂ ಸಮೀಪದ ಪುದೂರು ಗ್ರಾಮದ ನವೀನ್ (31) ಎಂಬಾತನೇ ಬಂಧಿತ ಆರೋಪಿ. ಈತ ಕಳೆದ ಎರಡು ವಾರದಿಂದ ಬೈಕ್‌ನಲ್ಲಿ ಮಲೆಮಹದೇಶ್ವರ.ಬೆಟ್ಟಕ್ಕೆ ಆಗಮಿಸಿ ಒಂದೊಂದು ಕೆಜಿಯಂತೆ ಹಸುವಿನ ಮಾಂಸವನ್ನು ಪ್ಲಾಸ್ಟಿಕ್ ಕೈ ಚೀಲದಲ್ಲಿ ಪೊಟ್ಟಣ ಮಾಡಿಕೊಂಡು 350 ರೂ.ಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಲಭಿಸಿದ ಮೇರೆಗೆ ಡಿವೈಎಸ್ಪಿ ಧರ್ಮೇಂದ್ರ ಹಾಗೂ ಇನ್ಸ್‌ಪೆಕ್ಟರ್ ಜಗದೀಶ್ ಅವರ ಮಾಗದರ್ಶನದಲ್ಲಿ ಸಬ್ ಇನ್ಸ್‌ಪೆಕ್ಟರ್ ಬಸವರಾಜು, ಸಿಬ್ಬಂದಿಗಳಾದ ಅಸ್ಲಾಂ ಪಾಷ, ರಮೇಶ್ ಕುಮಾರ್, ಮಹೇಶ್, ರಾಕೇಶ್, ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರಾದ ರವೀಂದ್ರ ಹಾಗೂ ಸೆಲ್ವ ಗಣಪತಿ ಅವರನ್ನು ಒಳಗೊಂಡ ತಂಡ ಬೆಳಗ್ಗೆ 8.30ರಲ್ಲಿ ಮಹದೇಶ್ವರ ಕಲ್ಯಾಣ ಮಂಟಪದ ಬಳಿ ದಾಳಿ ನಡೆಸಿದೆ.
ಈ ವೇಳೆ ಬೈಕ್‌ನಲ್ಲಿದ್ದ ಚೀಲವನ್ನು ಪರಿಶೀಲಿಸಿದಾಗ ಹಸುವಿನ ಮಾಂಸ ಮಾರಾಟ ಮಾಡುತ್ತಿರುವುದು ದೃಢಪಟ್ಟಿದೆ. ಬೈಕ್ ಹಾಗೂ 23 ಕೆಜಿ ಹಸುವಿನ ಮಾಂಸವನ್ನು ವಶಕ್ಕೆ ಪಡೆದ ಪೊಲೀಸರು, ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಪ್ರಕರಣ ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.