ಉಪ್ಪಿನಂಗಡಿ: ಇಳಂತಿಲ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಗೌಡ ವಿರುದ್ಧ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ಇಳಂತಿಲ ಗ್ರಾಪಂ ಕಚೇರಿಯಲ್ಲಿ ನಡೆದಿದೆ.
ಗ್ರಾಪಂ ಒಟ್ಟು 14 ಸದಸ್ಯರ ಪೈಕಿ 12 ಸದಸ್ಯರು ಅವಿಶ್ವಾಸದ ನಿರ್ಣಯ ಸೂಚನಾ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸಿದ್ದು, ಪರಿಣಾಮ ತಿಮ್ಮಪ್ಪ ಗೌಡ ಗ್ರಾಪಂ ಅಧ್ಯಕ್ಷ ಸ್ಥಾನ ಕಳೆದುಕೊಳ್ಳುವಂತಾಗಿದೆ. ಅಧ್ಯಕ್ಷರ ಪರ ಓರ್ವ ಸದಸ್ಯ ಮಾತ್ರ ಮತ ಚಲಾಯಿಸಿದ್ದಾರೆ.
ಫೆ.20ರಂದು ಇಳಂತಿಲ ಗ್ರಾಪಂ ಸದಸ್ಯರಾದ ವಸಂತ ಕುಮಾರ್, ವಿಜಯಕುಮಾರ್, ಚಂದ್ರಿಕಾ ಭಟ್, ಉಷಾ ಯು., ಸುಪ್ರೀತ್ ಪಿ., ಸಿದ್ದೀಕ್, ಯು.ಕೆ.ಈಸುಬು, ಕುಸುಮ, ನುಸ್ರುತ್ ಹೀಗೆ 9 ಮಂದಿ ಸದಸ್ಯರು ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಗೌಡ ಗ್ರಾಪಂ ಸದಸ್ಯರುಗಳಾದ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗ್ರಾಪಂ ಹಿತವನ್ನು ಧಿಕ್ಕರಿಸಿ ತಮ್ಮ ಮನಸ್ಸೋ ಇಚ್ಚೆ ಕೆಲಸ, ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪುತ್ತೂರು ಉಪವಿಭಾಗಾಧಿಕಾರಿ ಅವರಿಗೆ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು.
ಅವಿಶ್ವಾಸ ನಿರ್ಣಯ ಸೂಚನಾ ಸಭೆ ಇಳಂತಿಲ ಗ್ರಾಪಂ ಕಚೇರಿಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ಮಾ.18ರಂದು ನಡೆಯಿತು. ಈ ಸಂದರ್ಭ ಈ 9 ಮಂದಿ ಸದಸ್ಯರಲ್ಲದೆ ಗ್ರಾಪಂ ಉಪಾಧ್ಯಕ್ಷೆ ಸವಿತಾ, ಉಷಾ ಎಂ.ಜಾನಕಿ ಅಧ್ಯಕ್ಷರ ವಿರುದ್ಧ ಕೈ ಎತ್ತುವ ಮೂಲಕ ಮತ ಚಲಾಯಿಸಿದ್ದಾರೆ. ಅಧ್ಯಕ್ಷರ ಪರ ಗ್ರಾಪಂ ಸದಸ್ಯರಾಗಿರುವ ರಮೇಶ ಮಾತ್ರ ಇದ್ದರು.
14 ಮಂದಿ ಸದಸ್ಯರಿರುವ ಇಳಂತಿಲ ಗ್ರಾಪಂನಲ್ಲಿ 11 ಬಿಜೆಪಿ ಬೆಂಬಲಿತ ಸದಸ್ಯರು, ಕಾಂಗ್ರೆಸ್ ಬೆಂಬಲಿತ ಸದಸ್ಯರು ಇಬ್ಬರು, ಎಸ್‌ಡಿಪಿಐ ಬೆಂಬಲಿತ ಸದಸ್ಯರು ಒಬ್ಬರು ಇದ್ದಾರೆ. ಇಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿರುವ ತಿಮ್ಮಪ್ಪ ಗೌಡರ ವಿರುದ್ಧವೇ 9 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ತಿರುಗಿ ಬಿದ್ದಂತಾಗಿದೆ. ಗ್ರಾಪಂ ಪಿಡಿಒ ಸುಮಯ್ಯ, ಕಾರ್ಯದರ್ಶಿ ವಿಜಯ ಉಪಸ್ಥಿತರಿದ್ದರು.