ಉಪ್ಪಿನಂಗಡಿ: ಗ್ರಾಮಕ್ಕೊಂದು ಸಹಕಾರಿ ಸಂಘ ಸ್ಥಾಪನೆಯಾಗಬೇಕೆಂಬ ಸರ್ಕಾರದ ನಿಯಮದಂತೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದಲ್ಲೂ ಪ್ರತ್ಯೇಕ ಸಹಕಾರಿ ಪ್ರಾಥಮಿಕ ಕೃಷಿ ಪತ್ತಿನ ಸಂಘ ಸ್ಥಾಪನೆಯಾಗಬೇಕೆಂಬ ಆಗ್ರಹ ಇಳಂತಿಲ ಗ್ರಾಮ ಸಭೆಯಲ್ಲಿ ಕೇಳಿಬಂತು.
ಇಳಂತಿಲ ಗ್ರಾಪಂ ಅಧ್ಯಕ್ಷ ವಸಂತಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಗ್ರಾಪಂ ವ್ಯಾಪ್ತಿಯ ಕನ್ಯಾರಕೋಡಿ ಪ್ರದೇಶಕ್ಕೆ ಆಶಾ ಕಾರ್ಯಕರ್ತೆ ಬರುತ್ತಿಲ್ಲ, ಈ ಪರಿಸರದ ಗರ್ಭಿಣಿಯೋರ್ವರಿಗೆ ತಾಯಿ ಕಾರ್ಡ್ ಸಿಗುತ್ತಿಲ್ಲ, ಗ್ರಾಮದ ಹಾರೆಕೆರೆ ಎಂಬಲ್ಲಿ ಎರಡು ತಿಂಗಳ ಹಿಂದೆ ಎಚ್.ಟಿ. ವಿದ್ಯುತ್ ಲೈನೊಂದು ತುಂಡಾಗಿ ರಸ್ತೆಗೆ ಬಿದ್ದಾಗ ಸೂಕ್ತ ಕ್ರಮಕ್ಕಾಗಿ ಪವರ್‌ಮನ್‌ಗೆ ೆನಾಯಿಸಿದರೂ ಕರೆ ಸ್ವೀಕರಿಸದೆ ಕರ್ತವ್ಯ ನಿರ್ಲಕ್ಷ್ಯದಿಂದ ವರ್ತಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದವು.
ಉಪಾಧ್ಯಕ್ಷೆ ಸವಿತಾ ಎಚ್., ಸದಸ್ಯರಾದ ಚಂದ್ರಿಕಾ ಭಟ್, ಇಸುಬು ಯು.ಕೆ., ಸಿದ್ದೀಕ್, ಉಷಾ ಯು., ರಮೇಶ ಎನ್., ಜಾನಕಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಜಯ, ಸುಂದರ ವರದಿ ವಾಚಿಸಿದರು. ಪಿಡಿಒ ಸುಮಯ್ಯ ಸ್ವಾಗತಿಸಿದರು.
ಅಪಾಯಕಾರಿ ಸ್ಥಿತಿಯಲ್ಲಿದೆ ಸ್ಟೇ ವಯರ್
ಕನ್ಯಾರಕೋಡಿ ಒಳಗುಡ್ಡೆ ಬಳಿ ವಿದ್ಯುತ್ ಕಂಬದ ಸ್ಟೇ ವಯರ್ ಕಟ್ಟಿದ ಮರ ಮುರಿದು ಬಿದ್ದ ಪರಿಣಾಮ ಸ್ಟೇ ವಯರ್ ಅಪಾಯಕಾರಿಯಾಗಿ ನೇತಾಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಇಳಂತಿಲ ಸರ್ಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಬೇರೆ ಜಿಲ್ಲೆಗೆ ನಿಯೋಜನೆಗೊಂಡಿರುವುದನ್ನು ರದ್ದುಪಡಿಸಬೇಕು, ಕಾಯರ್ಪಾಡಿ ಕನ್ಯಾರಕೋಡಿ ರಸ್ತೆಯಲ್ಲಿ ಜೆಜೆಎಂ ಪೈಪ್‌ಲೈನ್‌ನಿಂದಾಗಿ ಕೆಲವೆಡೆ ಮಣ್ಣು ರಸ್ತೆ ಮೇಲೆ ಬಿದ್ದಿದ್ದರೆ, ಕೆಲವು ಕಡೆ ಇದ್ದ ಚರಂಡಿ ಮುಚ್ಚಿದ್ದು, ಈ ಬಗ್ಗೆ ತ್ವರಿತ ಕ್ರಮ ಜರುಗಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಬೇಕೆಂದು ಸದಸ್ಯರು ಆಗ್ರಹಿಸಿದರು.