ಜಿಲ್ಲೆ

ಮಾನವೀಯತೆ ರೂಢಿಸಿಕೊಂಡರೆ ಸಿಗುತ್ತದೆ ಗೌರವ: ಡಾ.ಸತೀಶ್ಚಂದ್ರ ಎಸ್.ಅನಿಸಿಕೆ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶಿಕ್ಷಣದಲ್ಲಿ ಭಾರತೀಯತೆಯನ್ನು ಮೈಗೂಡಿಸಿಕೊಳ್ಳಬೇಕು, ಆತ್ಮಪ್ರಜ್ಞೆ, ಅಂತಃಸತ್ವಗಳನ್ನು ರೂಢಿಸಿಕೊಳ್ಳಬೇಕು. ಶಿಸ್ತಿನ ವ್ಯಾಸಂಗದೊಂದಿಗೆ ದೃಢತೆ ಮೈಗೂಡಿಸಿಕೊಂಡು ಪ್ರಗತಿ ಪಥದತ್ತ ಸಾಗಬೇಕು. ದೃಢತೆಯ ಕಡೆಗೆ ಗುರಿಯನ್ನು ಇಟ್ಟುಕೊಂಡು ನಡೆದಾಗ ನಮ್ಮ ವಿದ್ಯಾಸಂಸ್ಥೆ ನೀಡಿದ ಶಿಕ್ಷಣ ಸಾರ್ಥಕವಾಗುತ್ತದೆ. ಮಾನವೀಯತೆ ರೂಢಿಸಿಕೊಂಡು ಬಾಳಿದರೆ ಗೌರವ ಸಿಗುತ್ತದೆ. ಗೌರವ ಹುಡುಕಿಕೊಂಡು ಬರುವ ರೀತಿಯಲ್ಲಿ ನಾವು ಬೆಳೆಯಬೇಕು ಎಂದು ಉಜಿರೆ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್.ಹೇಳಿದರು.

ಎಸ್.ಡಿ.ಎಂ. ಬಿ.ಎಡ್., ಡಿ.ಎಡ್.ಹಾಗೂ ಮಹಿಳಾ ಐ.ಟಿ.ಐ. ಜಂಟಿಯಾಗಿ ಎಸ್.ಡಿ.ಎಂ.ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ದ.ಕ.ಜಿ.ಪ. ಮಾಜಿ ಉಪಾಧ್ಯಕ್ಷೆ ರಾಜಶ್ರೀ ಎಸ್.ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅನುಭವ, ಛಲ, ಸತತ ಪ್ರಯತ್ನಗಳ ಮೂಲಕ ಗುರಿ ಸಾಧಿಸಬಹುದು. ಅವಮಾನ, ಅನುಮಾನ, ಸಮ್ಮಾನಗಳಿಲ್ಲದೆ ಸಾಧನೆ ಸಾಧ್ಯವಿಲ್ಲ. ಮನಸ್ಸಿನ ಧೀಶಕ್ತಿಯನ್ನು ಎಂದಿಗೂ ತ್ಯಜಿಸಬಾರದು. ಒದಗಿ ಬರುವ ಅವಕಾಶಗಳನ್ನು ಕೈಬಿಡಬಾರದು. ಜೀವನದಲ್ಲಿ ಗುರಿ ಸ್ಪಷ್ಟವಿದ್ದು ಸರಿದಾರಿಯಲ್ಲಿ ಸಾಗಿದಾಗ ಬದುಕಿಗೆ ಅರ್ಥ ಬರುತ್ತದೆ ಎಂದರು.

ಎಸ್.ಡಿ.ಎಂ. ಬಿ.ಎಡ್., ಡಿ.ಎಡ್. ಹಾಗೂ ಮಹಿಳಾ ಐಟಿಐಯ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಎಸ್.ಡಿ.ಎಂ. ಬಿಎಡ್. ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ಡಾನ, ಮಹಿಳಾ ಐಟಿಐ ಕಾಲೇಜಿನ ಪ್ರಾಂಶುಪಾಲ ವಿ.ಪ್ರಕಾಶ್ ಕಾಮತ್ ಹಾಗೂ ಡಿ.ಎಲ್.ಇಡಿ. ಕಾಲೇಜಿನ ಅನುಷಾ ಸಂಸ್ಥೆಯ ವಾರ್ಷಿಕ ವರದಿ ಓದಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಶ್ರೀಧನ್ಯಕುಮಾರ್, ಎಸ್.ಡಿ.ಎಂ. ಬಿ.ಎಡ್., ಡಿ.ಎಡ್. ಹಾಗೂ ಮಹಿಳಾ ಐಟಿಐಯ ವಿದ್ಯಾರ್ಥಿ ನಾಯಕರಾದ ಕೀರ್ತನ್ ಕುಮಾರ್, ಫಾತಿಮಾ ಹಾಗೂ ರಾಜಶ್ರೀ ಉಪಸ್ಥಿತರಿದ್ದರು.

ಎಸ್.ಡಿ.ಎಂ. ಮಹಿಳಾ ಐಟಿಐ ಕಾಲೇಜಿನ ವಿದ್ಯಾರ್ಥಿನಿ ಅಶೂರಾ ಸ್ವಾಗತಿಸಿ, ಎಸ್.ಡಿ.ಎಂ.ಬಿ.ಎಡ್.ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಕೀರ್ತನ್ ಕುಮಾರ್ ವಂದಿಸಿ, ಮಮತಾ ಕೆ. ನಿರೂಪಿಸಿದರು.

ಸನ್ಮಾನ, ಬಹುಮಾನ ವಿತರಣೆ

ಮಂಗಳೂರು ವಿಶ್ವವಿದ್ಯಾಯ ಫೆಬ್ರವರಿ 2023 ಮತ್ತು 2024ರಲ್ಲಿ ನಡೆಸಿದ ಬಿ.ಎಡ್., ಪರೀಕ್ಷೆಯಲ್ಲಿ 3, 4, ಹಾಗೂ 7ನೇ ರ‌್ಯಾಂಕ್ ಪಡೆದ ಭವ್ಯಾ ಡಿ.ನಾಯಕ್, ತೇಜಸ್ವಿ ಕೆ.ಮತ್ತು ಮಂಜುಶ್ರೀ ಡಿ. ನಾಯ್ಕ ಹಾಗೂ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಬೆಂಗಳೂರು ಜುಲೈ 2024ರಲ್ಲಿ ನಡೆಸಿದ ಡಿ.ಎಡ್.ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಭವ್ಯಾ ಎನ್.ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ರಾಷ್ಟ್ರೋತ್ಥಾನ ಪ್ರತಿಷ್ಠಾನ ಆಯೋಜಿಸಿದ್ದ ರಾಜ್ಯಮಟ್ಟದ ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಿ.ಎಡ್.ಪ್ರಶಿಕ್ಷಣಾರ್ಥಿ ವಿನೀತ್ ಲ್ಯಾನ್ಸನ್ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.