ಬೆಂಗಳೂರು: ಬಟ್ಟೆ ಮತ್ತು ಸೀರೆ ನೇಯ್ದು ಮತ್ತೊಬ್ಬರ ಗೌರವ ಕಾಪಾಡುತ್ತಿರುವ ಪದ್ಮಶಾಲಿ ಸಮಾಜವು ಯಾರಿಗೂ ಕೆಡುಕು ಬಯಸದ ಸಮಾಜವಾಗಿದೆ ಎಂದು ಸಚಿವ ಎಸ್.ಶಿವರಾಜ್ ತಂಗಡಗಿ ಮೆಚ್ಚಿಗೆ ವ್ಯಕ್ತಪಡಿಸಿದರು.
ಪದ್ಮಶಾಲಿ ನೇಕಾರ ಸಮಾಜ ಸಮ್ಮಿಲನ ವತಿಯಿಂದ ಲೇಖಕ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ ರಚಿಸಿರುವ ‘ಪದ್ಮಶಾಲಿ ನೇಕಾರ ಇತಿಹಾಸ ಮತ್ತು ಸಂಸ್ಕೃತಿ ದರ್ಶನ’ ಹಾಗೂ ‘ಕೊಡಿಯಾಲ ಪದ್ಮಶಾಲಿಯರ ಸಂಸ್ಕೃತಿ’ ಕಿರುಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಈ ಸಮಾಜದ ಜತೆಗೆ ನಾನು ಬೆಳೆದಿದ್ದೇನೆ. ಹಿಡಿದ ಹಠ ಸಾಧಿಸುವಲ್ಲಿ ಸಮಾಜದವರು ಎತ್ತಿದ ಕೈ. ಪುಸ್ತಕದಲ್ಲಿ ಪದ್ಮಶಾಲಿ ಸಮಾಜದ ಹಿರಿಯರು, ಪೂರ್ವಜರು, ಮುಂದಿನ ಯುವ ಪೀಳಿಕೆ ಏನು ಮಾಡಬೇಕು ಎಂಬುದನ್ನು ಸೊಗಸಾಗಿ ತಿಳಿಸಲಾಗಿದೆ. ಪದ್ಮಶಾಲಿ ಸಮಾಜದ ಮಾಹಿತಿ ಕ್ರೋಢೀಕರಿಸಿ 2 ಸಾವಿರ ಪುಟದ ಪುಸ್ತಕ ಬರೆಯುವುದು ಸುಲಭವಲ್ಲ. ಆಂಧ್ರ ಮೂಲದ ಪದ್ಮಶಾಲಿ ಸಮಾಜವು ಕರ್ನಾಟಕಕ್ಕೆ ವಲಸೆ ಬಂದಿದೆ. ನಾವೂ ಆಂಧ್ರ ಮೂಲದವರೇ, ಆದರೆ, ಕರ್ನಾಟಕಕ್ಕೆ ಬಂದ ಬಳಿಕ ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಾ ಬಂದಿದ್ದೇವೆ ಎಂದರು.
ದೇಶದಲ್ಲಿರುವ ನೂರಾರು ಜಾತಿ, ಧರ್ಮಗಳಿವೆ. ಪ್ರತಿ ಸಮಾಜಕ್ಕೂ ತನ್ನದೆಯಾದ ಇತಿಹಾಸವಿದೆ. ಆದರೆ, ಅದನ್ನು ಜನರಿಗೆ ತೋರಿಸುವ ಕೆಲಸ ಮಾಡಬೇಕು. ನಮ್ಮ ಸಮಾಜದ ಇತಿಹಾಸ ಜನರಿಗೆ ತಿಳಿಸುವಂತಾದರೆ ಮಾತ್ರ ಅದರ ಮಹತ್ವದ ಬಗ್ಗೆ ತಿಳಿಯುತ್ತದೆ. ನಾನು ಸಚಿವನಾದ ಬಳಿಕ ಸಾಹಿತಿಗಳ ಜೊತೆಗೆ ಹೆಚ್ಚಿನ ಓಡನಾಟ ಹೊಂದಿದ್ದೇನೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬಂದು ಇದೀಗ 50 ವರ್ಷಗಳಾಗಿದೆ. ಸಾಹಿತ್ಯ, ಪುಸ್ತಕ ಬರೆಯುವ ಕಲೆ ದೊಡ್ಡ ಕೆಲಸವಾಗಿದೆ. ಅದರ ಆಳ ಇಷ್ಟೆ ಇದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು. ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿಶಿವರಾಜ್ ವಿ.ಪಾಟೀಲ್, ಮಾಜಿ ಎಂಎಲ್ಸಿ ಕೆ.ಸಿ. ಕೊಂಡಯ್ಯ, ಉತ್ತರ ಕರ್ನಾಟಕ ಪದ್ಮಶಾಲಿ ಸಂಘದ ಕಾರ್ಯಾಧ್ಯಕ್ಷ ವೆಂಕಟೇಶ್ ಸಾಕಾ ಮತ್ತಿತರರಿದ್ದರು.
ಇದನ್ನೂ ಓದಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾವುಕ
ಕೋಟ್:
ನಮ್ಮಲ್ಲಿರುವ ಸಿದ್ದ ಸಂಶೋಧಕರು ದೇಶಕ್ಕೆ ಅಪಾಯಕಾರಿ ವ್ಯಕ್ತಿಗಳು. ಇವರ ಪ್ರಕಾರ ಅವರು ಮಾತ್ರ ಸಂಶೋಧಕರು, ವಿಶ್ವವಿದ್ಯಾಲಯಗಳಲ್ಲೇ ಇರಬೇಕು, ಪಿಎಚ್‌ಡಿ ಆಗಿರಬೇಕು ಎಂಬ ಭಾವನೆ ಹೊಂದಿದೆ. ಮತ್ತೊಂದೆಡೆ ಪ್ರಸಿದ್ದ ಸಂಶೋಧಕರು ಎಂದು ಗುರುತಿಸಿಕೊಂಡಿರುವ ಕೆಲವರು ಬೇರೆ ಕಡೆಗಳಲ್ಲಿರುವ ವಿಚಾರಗಳನ್ನು ತಮ್ಮ ಕೃತಿಯಲ್ಲಿ ಅಳವಡಿಸುತ್ತಾರೆ. ‘ಪದ್ಮಶಾಲಿ ನೇಕಾರ ಇತಿಹಾಸ ಮತ್ತು ಸಂಸ್ಕೃತಿ ದರ್ಶನ’ ಕೃತಿ ಬಹಳ ಉತ್ತಮವಾಗಿದೆ ಎಂದರು.
ಪ್ರೊ.ಕೆ.ಈ. ರಾಧಾಕೃಷ್ಣ, ಶಿಕ್ಷಣ ತಜ್ಞ