ಬೆಳಗಾವಿ: ಹಿಂದು-ಮುಸ್ಲಿಂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು. ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಘಟನೆಗಳ ಕುರಿತು ಪ್ರತಿಕ್ರಿಯಿಸಿದರು. ಹಿಂದು-ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅಪೇಕ್ಷೆ. ಇಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರ ವಹಿಸಬೇಕು ಯಡಿಯೂರಪ್ಪ ಹೇಳಿದರು.
ಸಿಎಂ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ, ಅವುಗಳಿಗೆ ನಮ್ಮ ಬೆಂಬಲ ಇಲ್ಲ. ಆ ಥರ ಘಟನೆಯಾದರೆ ಖಂಡಿಸುತ್ತೇನೆ. ಯಾರು ಅಂಥ ಸನ್ನಿವೇಶಗಳನ್ನು ಸೃಷ್ಟಿಸಿ, ಗೊಂದಲ ಉಂಟು ಮಾಡುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ ಎಂದು ಬಿಎಸ್ವೈ ಹೇಳಿದರು.
ಪಕ್ಷ ಸಂಘಟನೆಗೆ ಆದ್ಯತೆ: ನಾಳೆಯಿಂದ ಮೂರು ದಿನಗಳ ಪ್ರವಾಸ ಶುರುವಾಗುತ್ತದೆ, ಎಲ್ಲರೂ ಒಟ್ಟಾಗಿ ನಡೆಯುತ್ತೇವೆ. ಸಿಎಂ ಮತ್ತು ರಾಜ್ಯಾಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮತ್ತು ನಾನು ರಾಜ್ಯ ಪ್ರವಾಸದ ಮೂಲಕ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ಚುನಾವಣೆ ಈಗಿನಿಂದಲೇ ತಯಾರಿ ನಡೆಸಿದ್ದೇವೆ. ಈ ಪ್ರವಾಸ ಪ್ರಾರಂಭ ಆಗಿದ್ದು, ಎಲ್ಲ ಕಡೆ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು.