ಬೆಳಗಾವಿ: ಸಚಿವ ಮುರುಗೇಶ ನಿರಾಣಿ ಅವರು ಮಠಕ್ಕೆ ದಾನವಾಗಿ ನೀಡಿರುವ ವಸ್ತುಗಳೆಲ್ಲವನ್ನೂ ಅವರ ಮನೆಗೆ ಮರಳಿಸುತ್ತೇನೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಠದ ಪೀಠಾಧಿಪತಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಬೆಳಗಾವಿಯ ಗಾಂಧಿ ಭವನದಲ್ಲಿ ಬುಧವಾರ ನಡೆದ ಲಿಂಗಾಯತ ಸಮಾಜದ ರಾಜ್ಯ ಮಟ್ಟದ ಕಾರ್ಯಾಕಾರಿಣಿ ನಂತರ ಮಾತನಾಡಿ, ಕೆಲವೊಂದು ಅನಾಮಧೇಯ ವ್ಯಕ್ತಿಗಳು ಶ್ರೀಪೀಠಕ್ಕೆ ನಿರಾಣಿ ಅವರು ನೀಡಿರುವ ದಾನದ ಬಗ್ಗೆ ಜಾಲತಾಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇದರಿಂದ ನನಗೆ ಹಾಗೂ ಸಮಾಜಕ್ಕೆ ತೀವ್ರ ನೋವುಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ಸಮಾಜದ ಮುಖಂಡರ ಒಮ್ಮತದ ನಿರ್ಧಾರದಂತೆ ಎಲ್ಲ ವಸ್ತುಗಳನ್ನು ವಾಪಸ್ ಕೊಡಲು ನಿರ್ಣಯಿಸಲಾಗಿದೆ ಎಂದು ಹೇಳಿದರು. ರೊಟ್ಟಿ, ಬಟ್ಟೆ, ಕಸಬರಿಗೆ ಕೊಟ್ಟಿದ್ದೇವೆ ಎಂಬಿತ್ಯಾದಿ ಬರಹಗಳನ್ನು ಜಾಲತಾಣದಲ್ಲಿ ಅವರ ಹೆಸರಲ್ಲಿ ಹಾಕುತ್ತಿದ್ದಾರೆ. ಅದೆಲ್ಲವನ್ನೂ ಹಿಂತಿರುಗಿಸುತ್ತೇವೆ. ಏನೇನು ಕೊಟ್ಟಿದ್ದೇವೆ ಎನ್ನುವುದನ್ನು ನಿರಾಣಿ ಅವರೂ ಸ್ಪಷ್ಟವಾಗಿ ತಿಳಿಸಿಬಿಡಲಿ. ಪೀಠಕ್ಕೆ ಎಲ್ಲರೂ ದಾನ ಕೊಟ್ಟಿದ್ದಾರೆ. ಆದರೆ, ಯಾರೂ ಕೊಟ್ಟಿರುವುದನ್ನು ಹೇಳಲ್ಲ. ಯಾರೇ ಕೊಟ್ಟರೂ ಸಂಗಯ್ಯನ ಪ್ರಸಾದವೆಂದು ಸ್ವೀಕರಿಸಿದ್ದೇವೆ. ಆದರೆ, ಇವರು ಹೇಳಿಕೊಳ್ಳುತ್ತಿದ್ದಾರೆ. ನಾವು ಸ್ವಾಭಿಮಾನದಿಂದ ಬದುಕಿರುವವರು. ನಮ್ಮ ಋಣದಲ್ಲಿದ್ದಾರೆ ಎನ್ನುವ ನೋವಿನ ಮಾತುಗಳನ್ನು ಮೀಸಲಾತಿ ಹೋರಾಟ ಆರಂಭವಾದಾಗಿನಿಂದಲೂ ಕೆಲವರು ಹೇಳುತ್ತಿದ್ದಾರೆ ಎಂದು ವಿಷಾದಿಸಿದರು.
ಶ್ರೀಗಳ ಆಕ್ರೋಶ: ಅವರ ಹೆಸರಿನಲ್ಲಿ ಪೋಸ್ಟ್ ಹಾಕುತ್ತಿದ್ದರೂ ನಿರಾಣಿ ಮೌನ ವಹಿಸಿದ್ದಾರೆ. ಬೇರೆಯವರ ಮೂಲಕ ಹೇಳಿಸುವ ಬದಲಿಗೆ ಅವರಾಗಿಯೇ ಕೇಳಲಿ. ಪದೇಪದೆ ಹೇಳುತ್ತಿರುವುದರಿಂದ ಚನ್ನಮ್ಮಳ ಸಮಾಜದ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನಾನು ಆ ಪ್ರಚಾರ ಮಾಡಿಸುತ್ತಿಲ್ಲ ಎಂದು ನಿರಾಣಿ ಸ್ಪಷ್ಟವಾಗಿ ತಿಳಿಸಿ, ಕ್ಷಮಾಪಣೆ ಕೇಳಲಿ. ಸುಮ್ಮನಿರುವುದರಿಂದ ಅವರೇ ಮಾಡಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತದೆ. ಮಾಡಿಸಿಲ್ಲವಾದರೆ ಅವರು ಖಂಡಿಸಬೇಕಿತ್ತಲ್ಲವೇ? ಕೆಲ ಸ್ವಾಮೀಜಿಗಳ ಮೂಲಕವೂ ಹೇಳಿಸಿದ್ದಾರೆ. ದಾನ ಕೊಟ್ಟಿದ್ದನ್ನು ಬಹಿರಂಗಪಡಿಸುವ ಕೆಲಸವನ್ನು ದೇಶದ ಧಾರ್ವಿುಕ ಇತಿಹಾಸದಲ್ಲಿಯೇ ಯಾರೂ ಮಾಡಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾತಿನಂತೆ ಸಿಎಂ ಮೀಸಲಾತಿ ಘೋಷಿಸಿ: ರಾಜ್ಯ ಸರ್ಕಾರದಿಂದ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಹಾಗೂ ಕೇಂದ್ರದಿಂದ ಹಿಂದುಳಿದ ವರ್ಗದ ಮೀಸಲಾತಿಗೆ ಹಕ್ಕೊತ್ತಾಯ ಮಂಡಿಸಿ ವರ್ಷದಿಂದ ನಿರಂತರವಾಗಿ ಚಳವಳಿ ನಡೆಸುತ್ತಿದ್ದೇವೆ. ಬಜೆಟ್ ಒಳಗಾಗಿ ಮೀಸಲಾತಿ ಘೊಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿ ನಗರದಲ್ಲಿ ಡಿ.16ರಂದು ನಡೆದಿದ್ದ ಸಮಾಜದ ಶಾಸಕರು ಮತ್ತು ಮುಖಂಡರ ಸಭೆಯಲ್ಲಿ ಭರವಸೆ ನೀಡಿದ್ದರು. ಆ ಮಾತಿನಂತೆ ನಡೆದುಕೊಂಡು ಮೀಸಲಾತಿ ಘೊಷಿಸಬೇಕು ಎಂದು ಆಗ್ರಹಿಸಿದರು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಎ.ಬಿ. ಪಾಟೀಲ, ಮಲ್ಲೇಶ, ಶಶಿಕಾಂತ ನಾಯಿಕ, ಡಾ.ವಿಶ್ವನಾಥ ಪಾಟೀಲ, ವೀಣಾ ಕಾಶಪ್ಪನವರ ಇತರರು ಇದ್ದರು.