ಜಿಲ್ಲೆ

ಲಾಲ್​ಬಾಗ್ ಅಭಿವೃದ್ಧಿಗೆ ರೂ.10 ಕೋಟಿ ನೀಡುತ್ತೇನೆ; ಡಿಸಿಎಂ ಡಿ.ಕೆ ಶಿವಕುಮಾರ್| Bengaluru

ಬೆಂಗಳೂರು; ಸಾರ್ವಜನಿಕರು ಬಯಸಿದಂತೆ ಲಾಲ್​ಬಾಗ್ ಅಭಿವೃದ್ಧಿಗೆ ಜಿಬಿಎ (Greater Bengaluru Authority) ವತಿಯಿಂದ 10 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ.

ಲಾಲ್​ಬಾಗ್ ನಲ್ಲಿ ನಾಗರೀಕರ ಜತೆ ನಡಿಗೆ ಹಾಗೂ ಸಂವಾದದ ನಂತರ ಟನಲ್ ರಸ್ತೆಗೆ ಪ್ರವೇಶ ಜಾಗ ಪರಿಶೀಲನೆ ನಡೆಸಿದ ಡಿಕೆಶಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಅನೇಕ ಸಾರ್ವಜನಿಕರ ಜೊತೆ ಚರ್ಚೆ ಮಾಡಿ ಅವರ ಸಲಹೆ, ದೂರು ಆಲಿಸಿದ್ದೇನೆ. ಅವರ ಸಮಸ್ಯೆ ಬಗೆಹರಿಸಲಾಗುವುದು. ಲಾಲ್​ಬಾಗ್ ಅಭಿವೃದ್ಧಿಗೆ ಜಿಬಿಎ ವತಿಯಿಂದ 10 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಿದ್ದೇವೆ. ಹಿರಿಯರು ಹಾಗೂ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಮ್ ಮಾಡಲಾಗುವುದು ಎಂದು ಭರವಸೆ ನೀಡಿದರು. ಬೆಂಗಳೂರಿನಲ್ಲಿ ಅವಕಾಶ ಇರುವೆಡೆ ಲಾಲ್​ಬಾಗ್ ಮಾದರಿಯಲ್ಲಿ ಟ್ರೀಪಾರ್ಕ್ ಮಾಡಲು ಅರಣ್ಯ ಇಲಾಖೆ ಜೊತೆ ಚರ್ಚೆ ಮಾಡುತ್ತೇನೆ. ಅದಕ್ಕೆ ಆರ್ಥಿಕ ಬೆಂಬಲವನ್ನು ನೀಡಲಾಗುವುದು ಎಂದು ತಿಳಿಸಿದರು. ಇಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯರು ಹಾಗೂ ಆಂಬುಲೆನ್ಸ್ ಸೇವೆ ನಿಯೋಜನೆಗೆ ತೀರ್ಮಾನಿಸಿದ್ದೇವೆ. ಇನ್ನು ಮುಂದೆ ಇಲ್ಲಿನ ಶೌಚಾಲಯಗಳ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುವುದು. ಬೆಂಗಳೂರಿನ ಕಸ ವಿಲೇವಾರಿ, ವಾಹನ ನಿಲುಗಡೆ ಸೇರಿದಂತೆ ಅನೇಕ ವಿಚಾರವಾಗಿ ಸಲಹೆ, ಅಭಿಪ್ರಾಯಗಳು ಬಂದಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಟನಲ್ ರಸ್ತೆಗೆ ಲಾಲ್​ಬಾಗ್ ನ 6 ಎಕರೆ ಭೂಮಿ ಅಗತ್ಯವಿಲ್ಲ

ಲಾಲ್ ಬಾಗ್ ಸಾರ್ವಜನಿಕರ ಆಸ್ತಿಯಾಗಿದೆ. ಈ ಸಾರ್ವಜನಿಕರ ಆಸ್ತಿ ಉಳಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುತ್ತೇವೆ. ಆರು ಎಕರೆ ಭೂಮಿ ವಶಪಡಿಸಿಕೊಳ್ಳುವ ಅಗತ್ಯವಿಲ್ಲ. ಅರ್ಧ ಎಕರೆ ಪ್ರದೇಶದಲ್ಲಿ ಅಶೋಕ ಪಿಲ್ಲರ್ ಕಡೆ ಟನಲ್ ರಸ್ತೆಗೆ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗುವುದು. ಪಾರ್ಕಿಂಗ್​ಗಾಗಿ ಇರುವ ಜಾಗದಲ್ಲಿ ಸುಮಾರು ಒಂದು ಎಕರೆ ಜಾಗವನ್ನು ಸ್ಟೋರೇಜ್​ಗೆ ಬಳಸಿಕೊಳ್ಳುತ್ತೇವೆ. ನಂತರ ಅದನ್ನು ತೆರವುಗೊಳಿಸಿ ಲಾಲ್​ಬಾಗ್​ಗೆ ಕೊಡುತ್ತೇವೆ. ಸಣ್ಣದಾಗಿರುವ ಗಿಡಗಳನ್ನು ತೆರವುಗೊಳಿಸಿ, ಮತ್ತೆ ಗಿಡ ನೆಡುತ್ತೇವೆ. ಉಳಿದಂತೆ ಲಾಲ್​ಬಾಗ್ ಉದ್ಯಾನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.

ಬಿಜೆಪಿಯವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಮುಖ್ಯ

(ಏಜೆನ್ಸೀಸ್)

ಜಿಬಿಎ ವಿಚಾರದಲ್ಲಿ ಬಿಜೆಪಿಯವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರಿಗೆ ಬೆಂಗಳೂರು ಅಭಿವೃದ್ಧಿ ಮುಖ್ಯವಲ್ಲ, ರಾಜಕೀಯವೇ ಮುಖ್ಯ. ಅವರು ಜಿಬಿಎ ಸಮಿತಿ ಸಭೆಯಲ್ಲಿ ತಮ್ಮ ಅಭಿಪ್ರಾಯ, ಸಲಹೆ, ದೂರು ಹೇಳಿಕೊಳ್ಳಬಹುದಾಗಿತ್ತು. ಜನ ಅವರನ್ನು ಗೆಲ್ಲಿಸಿ ಅಧಿಕಾರ ನೀಡಿದ್ದು, ಆ ಜನರ ಧ್ವನಿಯಾಗಬೇಕಿತ್ತು. ಆದರೆ ಆ ಕೆಲಸ ಮಾಡಲಿಲ್ಲ. ಬದಲಿಗೆ ಜಿಬಿಎ ರದ್ದು ಮಾಡುವುದಾಗಿ ಹೇಳಿದ್ದಾರೆ. ಇದುವರೆಗೂ ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಯೋಜನೆ, ತೀರ್ಮಾನಗಳನ್ನು ಯಾವುದೇ ಸರ್ಕಾರ ಬದಲಿಸಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಸಂವಿಧಾನದ ಚೌಕಟ್ಟಿನಲ್ಲಿ ಜನಪರ ತೀರ್ಮಾನ ಮಾಡುತ್ತೆ. ಅವರು ಜಿಬಿಎ ವಿರೋಧಿಸುವುದೇ ಆದರೆ ಪಾಲಿಕೆ ಚುನಾವಣೆ ಬಹಿಷ್ಕರಿಸಲಿ ಎಂದರು.