

ಬೆಂಗಳೂರು: ದೇಶದ ಡಿಜಿಟಲ್ ಆರ್ಥಿಕತೆಯನ್ನು ಕರ್ನಾಟಕ ಮುನ್ನಡೆಸುತ್ತಿದೆ. ಆದರೆ, ರಾಜ್ಯಕ್ಕೆ ಬರಬೇಕಿದ್ದ 3 ಸೆಮಿಕಂಡಕ್ಟರ್ ಯೋಜನೆಗಳು ಅನ್ಯ ರಾಜ್ಯಗಳ ಪಾಲಾಗಿವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬೇಸರಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಆಯೋಜಿಸಿರುವ 2 ದಿನಗಳ ‘ಇನ್ನೋವರ್ಜ್ -2025’ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಜಾಗತಿಕ ನಾವೀನ್ಯತೆ ಶಕ್ತಿ ಕೇಂದ್ರವಾಗಿ ಕರ್ನಾಟಕ ಹೊರಹೊಮ್ಮುತ್ತಿದೆ. ಕೃಷಿ ತಂತ್ರಜ್ಞಾನದಿಂದ ಬಾಹ್ಯಾಕಾಶದ ಪ್ರಗತಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ರಾಜ್ಯ ಮಾಡುತ್ತಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಚಿಪ್ ಡಿಸೈನರ್‌ಗಳಿದ್ದಾರೆ. ಆದರೆ, ಅತಿ ಹೆಚ್ಚು ಚಿಪ್ ಉತ್ಪಾದನೆ ಮಾಡಬೇಕು ಎಂಬ ಉತ್ಸಾಹದಲ್ಲಿದ್ದೇವೆ. ಇದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರ ನಮಗೆ ಅಗತ್ಯ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
ಚಿಪ್ ಉತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಹಾಯಧನ ನೀಡುತ್ತದೆ. ಚಿಪ್ ಉತ್ಪಾದಕ ಸಂಸ್ಥೆಗಳಿಗೆ ಉದ್ದಿಮೆಯನ್ನು ಎಲ್ಲಿ ಸ್ಥಾಪಿಸುತ್ತೀರಿ ಎಂದು ಕೇಳಿದರೆ ಅವರು ಕರ್ನಾಟಕವನ್ನೇ ಆಯ್ಕೆ ಮಾಡುತ್ತಾರೆ. ಆದರೆ, ದೆಹಲಿಗೆ ಪ್ರಸ್ತಾವನೆ ಹೋಗುತ್ತಿದ್ದಂತೆ ಉದ್ದಿಮೆಗಳು ಗುಜರಾತ್, ಅಸ್ಸಾಂಗೆ ಹೋಗುತ್ತಿವೆ. ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ನಾವೀನ್ಯತೆ ಕ್ಲಸ್ಟರ್ ನಿರ್ಮಿಸಲು ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತಿದ್ದೇವೆ. ಬೆಳವಣಿಗೆಯ ಪ್ರಯೋಜನ ಪ್ರತಿ ಪ್ರದೇಶ ತಲುಪಬೇಕು ಎಂದು ಸಚಿವರು ಹೇಳಿದರು.
ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಮಾತನಾಡಿ, ಶೈಕ್ಷಣಿಕ, ಉದ್ಯಮ, ನವೋದ್ಯಮಗಳು ಮತ್ತು ಸರ್ಕಾರ ಒಟ್ಟಿಗೆ ಸೇರಿದಾಗ ನಾವೀನ್ಯತೆ ಅಭಿವೃದ್ಧಿ ಹೊಂದುತ್ತದೆ. ಭಾರತದ ನಾವೀನ್ಯತೆಗೆ ಕರ್ನಾಟಕ ಕೇಂದ್ರ ಬಿಂದುವಾಗಿದೆ ಎಂದರು.ಸಿಐಐ ಮಾಜಿ ಅಧ್ಯಕ್ಷ ಕಮಲ್ ಬಾಲಿ, ಸಿಐಐ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಶ್ರೀಕಾಂತನ್ ಹಾಜರಿದ್ದರು.
ಸಂಶೋಧನೆ, ಶೈಕ್ಷಣಿಕ ಮತ್ತು ಉದ್ಯಮಗಳು ಒಗ್ಗೂಡಿದರೆ ಭಾರತವು ನಾವೀನ್ಯತೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚು ಹೂಡಿಕೆಯಾಗಬೇಕು. ಉದ್ಯಮದೊಂದಿಗೆ ಸಹಕರಿಸುವ ಶ್ರೇಷ್ಠತೆಯ ಕೇಂದ್ರಗಳನ್ನು ಬೆಳೆಸಬೇಕು. ಉತ್ಪನ್ನಗಳು ಪ್ರಯೋಗಾಲಯದಿಂದ ಮಾರುಕಟ್ಟೆಗೆ ಸರಾಗವಾಗಿ ಚಲಿಸುವಂತೆ ನೋಡಿಕೊಳ್ಳಬೇಕು.
| ಕ್ರಿಸ್ ಗೋಪಾಲಕೃಷ್ಣನ್, ಇನ್ಫೋಸಿಸ್ ಸಹ ಸಂಸ್ಥಾಪಕ.