ಜಿಲ್ಲೆ

ಗ್ಯಾರಂಟಿ ಮತ್ತು ಅಭಿವೃದ್ಧಿಗೆ ದುಡ್ಡು ಕೊಟ್ಟಿರುವೆ.. ಇದೆಲ್ಲಾ ಎಲ್ಲಿಂದ ಬಂತು ಮಿಸ್ಟರ್ ಮೋದಿ!: CM Siddaramaiah

ಬಳ್ಳಾರಿ: ನಮ್ಮ ಬಳಿ ಸಂಬಳ ಕೊಡೋಕೆ ದುಡ್ಡಿಲ್ಲ ಅಂತ ಮೋದಿ ಹೇಳ್ತಾರೆ, ನಾನು ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ರೂ. ಜತೆಗೆ 1 ಲಕ್ಷ 20 ಸಾವಿರ ಕೋಟಿ ಅಭಿವೃದ್ಧಿಗೆ ಹಣ ಕೊಟ್ಟಿದ್ದೇವೆ. ಇದೆಲ್ಲಾ ಎಲ್ಲಿಂದ ಬಂತು ಮಿಸ್ಟರ್ ಮೋದಿ ಎಂದು ಸಿಎಂ ಸಿದ್ದರಾಮಯ್ಯ( CM Siddaramaiah) ಪ್ರಶ್ನಿಸಿದರು.

ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಶುಕ್ರವಾರ (ನ.08) ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

15ನೇ ಹಣಕಸು ಆಯೋಗದಿಂದ 11,495 ಕೋಟಿ ರೂ. ನಮಗೆ ಕೇಂದ್ರ ಸರ್ಕಾರ ಕೊಡಬೇಕಿತ್ತು. ಇದು ನಮ್ಮದೇ ಪಾಲಿನ ಹಣ. ಇದನ್ನು ರಾಜ್ಯಕ್ಕೆ ಕೊಡದೆ ನಮಗೆ ವಂಚಿಸಿದ್ದಾರೆ. ಇದೂ ಸೇರಿ ಒಟ್ಟು 17,000 ಕೋಟಿ ರೂ. ನಮಗೆ ಕೇಂದ್ರ ಸರ್ಕಾರದಿಂದ ವಂಚನೆಯಾಗಿದೆ. ನಮ್ಮ ಪಾಲಿನ ಹಣ ಬಂದಿದ್ದರೆ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಿ ಬಿಡ್ತಾರೆ ಎನ್ನುವ ಕಾರಣದಿಂದ ನಮಗೆ ವಂಚಿಸಿ ರಾಜ್ಯದ ಅಭಿವೃದ್ಧಿಗೆ ಮೋದಿ ಕಂಟಕರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಕಲ್ಯಾಣ ಕರ್ನಾಟಕಕ್ಕೆ 371ಜೆ ಜಾರಿ ಮಾಡಲು ಬಿಜೆಪಿ ವಿರೋಧಿಸಿತ್ತು.‌ ಯಾವುದೇ ಕಾರಣಕ್ಕೂ ಕೊಡಬಾರದು ಎಂದು ಬಿಜೆಪಿ ತೀರ್ಮಾನಿಬಿಟ್ಟಿತ್ತು. ಆದರೆ, ಕೇಂದ್ರದಲ್ಲಿದ್ದ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ 371 ಜೆ ಜಾರಿ ಮಾಡಿತು. ಸೋ‌ನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸಹಕಾರದಲ್ಲಿ 371ಜೆ ಜಾರಿಯಾಯ್ತು. ಇದು ಜಾರಿ ಆಗುತ್ತಿದ್ದಂತೆ ನಾನು 5000 ಕೋಟಿ ವಿಶೇಷ ಅನುದಾನವನ್ನು ಬಳ್ಳಾರಿ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿದ್ದೇನೆ. ಬಿಜೆಪಿಯವರು ಏನು ಕೊಟ್ಟಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.

ನಾನು ಅಂದು ರೆಡ್ಡಿ ಪಟಾಲಂಗೆ ಸೆಡ್ಡು ಹೊಡೆದೆ

ನನಗೆ ಬಳ್ಳಾರಿಗೆ ಕಾಲು ಇಡಿ ನೋಡೋಣ ಅಂತ ರೆಡ್ಡಿ ಸವಾಲು ಹಾಕಿದ್ದರು. ನಾನು ಸವಾಲು ಸ್ವೀಕರಿಸಿ ಪಾದಯಾತ್ರೆ ಮೂಲಕವೇ ಬಳ್ಳಾರಿಗೆ ಬಂದು ಸೆಡ್ಡು ಹೊಡೆದೆ. ಅಲ್ಲಿಂದಲೇ ರೆಡ್ಡಿ ಅವನತಿ ಶುರುವಾಯಿತು. ಸಂಡೂರಿಗೆ, ಬಳ್ಳಾರಿ ಜನರಿಗೆ ಕೆಟ್ಟ ಹೆಸರು ತಂದ ರೆಡ್ಡಿಗೆ, ಬಿಜೆಪಿಗೆ ಮತ್ತೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರ್ತದಾ ಯೋಚಿಸಿ ಎಂದರು.