ಬಾಗಲಕೋಟೆ: ನಾನು ಮುಖ್ಯಮಂತ್ರಿ ಆಗ್ತಿನಿ ಅಂತ ಹೇಳಿಲ್ಲ. ಇಂದು, ಈ ಹಿಂದೆ, ಮುಂದೆ ಯಾವತ್ತೂ ಹೇಳುವುದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ, ನಾನು ಸಹೋದರರಂತೆ ಇದ್ದೇವೆ. ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ಬೀಳಗಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅವರಂತೆ (ಯತ್ನಾಳ) ನಾನು ಎಲ್ಲಿಯೂ ಸಿಎಂ ಆಗುತ್ತೇನೆ ಅಂತ ಹೇಳಿಲ್ಲ. ಪ್ರಾಮಾಣಿಕ, ದಕ್ಷ ಆಡಳಿತಗಾರ ಬಸವರಾಜ ಬೊಮ್ಮಾಯಿ ಅವರೊಂದಿಗೆ 30 ವರ್ಷದಿಂದ ಅನ್ಯೋನ್ಯ ಸಂಬಂಧವಿದೆ. 2023ವರೆಗೆ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. 2023ರ ಚುನಾವಣೆಯಲ್ಲಿ 125ಕ್ಕೂ ಹೆಚ್ಚು ಹಾಗೂ 2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 25ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿ ಇದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ತಿರುಗೇಟು ನೀಡಿದರು.
ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಪರವಾಗಿ ಒಳ್ಳೆಯ ವಾತಾವರಣವಿದೆ. ರಾಜ್ಯದ 25 ಪರಿಷತ್ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಅದರಲ್ಲಿ 20 ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದೇವೆ. 15ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಲ್ಲ ಸಮಾಜಗಳಿಗೂ ನ್ಯಾಯ ಸಿಗಬೇಕು: ಒಕ್ಕೂಟ ಮೂಲಕ ಪಂಚಮಸಾಲಿ ಸಮಾಜವನ್ನು ಒಡೆಯುತ್ತಿದ್ದಾರೆ ಎನ್ನುವ ನನ್ನ ಮೇಲಿನ ಆರೋಪ ಶುದ್ಧ ಸುಳ್ಳು. ಮುರುಗೇಶ ನಿರಾಣಿ ಏನು? ರಾಜ್ಯ, ಕ್ಷೇತ್ರ ಅಭಿವೃದ್ಧಿಗೆ ಎಷ್ಟು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಮುರುಗೇಶ ನಿರಾಣಿ ಹೇಳಿದರು. ಈವರೆಗೆ ಯಾರ ಬಗ್ಗೆಯೂ ಹೇಳಿಕೆ ನೀಡಿಲ್ಲ. ಬಸನಗೌಡ ಪಾಟೀಲ (ಯತ್ನಾಳ), ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಿರಿಯರು, ದೊಡ್ಡವರು. ಅವರು ಒಳ್ಳೆಯವರು. ದೊಡ್ಡ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರ ದಾರಿಯಲ್ಲಿ ನಾನು ಬರುವುದಿಲ್ಲ.
ಏನಾದರು ತಪ್ಪು ಮಾಡಿರುವುದು ಹೇಳಿದಲ್ಲಿ ತಿದ್ದಿಕೊಂಡು ಮುಂದೆ ಹೋಗುತ್ತೇನೆ ಎಂದು ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದರು. ಇನ್ನು ನಾನು ಯಾವ ಸಂಘಟನೆ, ಸಮಾವೇಶವನ್ನು ಸಂಘಟಿಸಿಲ್ಲ. ಅತಿಥಿಯಾಗಿ ಭಾಗವಹಿಸಿದ್ದೇನೆ. ಬೆಳಗಾವಿ ಅಧಿವೇಶನ ವೇಳೆ ಮೀಸಲಾತಿ ಕುರಿತು ಸರ್ಕಾರದ ಮೇಲೆ ಒತ್ತಡ ತರುವ ಪ್ರಯತ್ನದ ಸಂದರ್ಭದಲ್ಲಿ ಕರೆದರೆ ಹೋಗುತ್ತೇನೆ. ಇಲ್ಲವಾದಲ್ಲಿ ಹೋಗುವುದಿಲ್ಲ. ಮೀಸಲಾತಿ ಕುರಿತು ಸಿಎಂ ಬೊಮ್ಮಾಯಿ ಬಳಿ ಹರಿಹರ ಪೀಠದ ಶ್ರೀಗಳು, ಡಾ.ಅಶ್ವತ್ಥನಾರಾಯಣ, ಶಂಕರ ಪಾಟೀಲ ಮುನೇನಕೊಪ್ಪ ಸೇರಿ ಇತರ ನಾಯಕರು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಸಿಎಂ ಉತ್ತಮವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಪಂಚಮಸಾಲಿ ಅಷ್ಟೇ ಅಲ್ಲ ಸಮಸ್ತ ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ಎಲ್ಲ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಸಮಾನವಾಗಿ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಇದೆ ಎಂದು ನಿರಾಣಿ ತಿಳಿಸಿದರು.
ಶ್ರೀಗಳು, ನನ್ನ ನಡುವೆ ಗ್ರಹಣ ಬಂದಿದೆ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ಒಳ್ಳೆಯ ಸಂಬಂಧವಿದೆ. ಜಗತ್ತಿಗೆ ಬೆಳಕು ನೀಡುವ ಸೂರ್ಯನಿಗೆ ಗ್ರಹಣ ಬಂದಾಗ ಕಪ್ಪು ಆಗುತ್ತಾನೆ. ಹಾಗೇ ಶ್ರೀಗಳು ಹಾಗೂ ನನ್ನ ನಡುವೆ ಗ್ರಹಣ ಬಂದಿದೆ. ಕಾಲ ಕಳೆದಂತೆ ಎಲ್ಲವೂ ಸರಿ ಹೋಗಲಿದೆ ಎನ್ನುವ ವಿಶ್ವಾಸವಿದೆ. ಶ್ರೀಗಳು ಎದುರಿಗೆ ಬಂದರೆ ವಂದಿಸಿ ಗೌರವ ನೀಡುತ್ತೇನೆ ಎಂದ ಮುರುಗೇಶ ನಿರಾಣಿ, ಪಂಚಮಸಾಲಿ ಸಮಾಜದ ಎರಡು ಸಂಘಟನೆಗಳು ಒಂದೇ ಇವೆ. ನಾವೇ ದೂರ ಇದ್ದೇವೆ. ನನ್ನ ರಾಜಕೀಯ ಜೀವನಕ್ಕೆ ಬೀಳಗಿ ಕ್ಷೇತ್ರ, ಬಿಜೆಪಿ ಕೊಡುಗೆ ಅಪಾರ. ಟಿಕೆಟ್ ನೀಡಿದರೂ ಬಿಟ್ಟರೂ ಪಕ್ಷ ಬಿಡಲ್ಲ. ರಾಜಕೀಯದಲ್ಲಿ ಎಲ್ಲಿವರೆಗೂ ಇರುತ್ತೇನೆ. ಅಲ್ಲಿವರೆಗೆ ಬೀಳಗಿ ಕ್ಷೇತ್ರ ಬಿಟ್ಟು ಬೇರೆಡೆ ಸ್ಪರ್ಧೆ ಮಾಡಲ್ಲ ಎಂದು ಸ್ಪಷ್ಟಪಡಿಸಿದರು.