ಜಿಲ್ಲೆ

ನಾನು ಡಿಕೆ ಸುರೇಶ್​ ಅವರ ಪತ್ನಿ... ಎಲ್ಲೇ ಹೋದ್ರು ಜನ ಸ್ಟೇಟಸ್​ ಕೇಳ್ತಾರೆ ಎಂದ ಮಹಿಳೆ! ವಿಡಿಯೋ ವೈರಲ್​... DK Suresh

DK Suresh : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಪತ್ನಿ ಎಂದು ಹೇಳಿಕೊಂಡು ಮಹಿಳೆಯೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

ಹಲೋ ಗುಡ್​ ಮಾರ್ನಿಂಗ್​, ನಾನು ಡಿಕೆ ಸುರೇಶ್​ ಅವರ ಬಗ್ಗೆ ಹೇಳಬೇಕೆಂದರೆ, ನಾನು ಡಿಕೆ ಸುರೇಶ್​ ಹೆಂಡ್ತಿಯಾಗಿ ಹೇಳಬೇಕೆಂದರೆ, ನಾನು ಮೊದಲು ಡಿಕೆ ಸುರೇಶ್​​ಗೆ ಅಭಿಮಾನಿ. ಯಾವ ರೀತಿ ಅಂದ್ರೆ, ಅವರು ಎಂಪಿಯಾಗಿ ಮಾಡಿದ ಕೆಲಸಗಳನ್ನು ಇಂದಿನ ಯುವಕರು ಕೂಡ ಮಾಡಲು ಸಾಧ್ಯವಿಲ್ಲ. ಡಿಕೆ ಸುರೇಶ್​ ತುಂಬಾ ಆ್ಯಕ್ಟೀವ್​, ತುಂಬಾ ಬುದ್ಧಿವಂತರು ಮತ್ತು ತುಂಬಾ ಶ್ರಮ ಜೀವಿ. ಅವರು ಮಾಡಿರುವ ಕೆಲಸವನ್ನು ಇಂದು ಯಾರೂ ಮಾಡೋಕೆ ಸಾಧ್ಯವಿಲ್ಲ. ಶಿಕ್ಷಣ, ನೀರಾವರಿ ಮತ್ತು ಆರೋಗ್ಯ ಇಲಾಖೆ ಸೇರಿ ಎಷ್ಟೊಂದು ಕೆಲಸ ಮಾಡಿದ್ದಾರೆ ಗೊತ್ತಾ? ಬಸ್​ ನಿಲ್ದಾಣಗಳು, ಶಾಲಾ-ಕಾಲೇಜುಗಳು ಸೇರಿ ತುಂಬಾ ಕೆಲಸ ಮಾಡಿದ್ದಾರೆ. ಅದಕ್ಕಾಗಿ ನಾನು ಅವರನ್ನು ಹೊಗಳುತ್ತೇನೆ.

ಎಲ್ಲರು ಬಂದು ಕೋಟಿಗಟ್ಟಲೆ ದುಡ್ಡು ಮಾಡಿಕೊಂಡು ಹೋಗ್ತಾರೆ ಆದರೆ, ಡಿಕೆ ಸುರೇಶ್​ ಅವರು ಕೆಲಸ ಮಾಡಿದ್ದಾರೆ. ಅದನ್ನು ನಾನು ಮೆಚ್ಚಿಕೊಳ್ಳುತ್ತೇನೆ. ಅವರು ತುಂಬಾ ಕೆಲಸ ಮಾಡಿದ್ದಾರೆ ಅನ್ನೋ ಖುಷಿಗೆ ನಾನು ಅವರ ಫೋಟೋವನ್ನು ಶೇರ್​ ಮಾಡುತ್ತೇನೆ. ಇಡೀ ಕರ್ನಾಟಕದಲ್ಲಿ ಯಾವೊಬ್ಬ ರಾಜಕಾರಣಿಯು ಕೂಡ ಡಿಕೆ ಸುರೇಶ್​ ರೀತಿ ಕೆಲಸ ಮಾಡಿಲ್ಲ. ಆ ಒಂದು ಹೆಮ್ಮೆಯಿಂದ ನಾನು ಅವರ ಫೋಟೋವನ್ನು ಶೇರ್​ ಮಾಡಿಕೊಳ್ಳುತ್ತೇನೆ. ಅವರನ್ನು ನನ್ನ ಗಂಡ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ವಿಡಿಯೋದಲ್ಲಿರುವ ಮಹಿಳೆ ಹೇಳಿದ್ದಾರೆ.

ಮತ್ತೊಂದು ವಿಡಿಯೋ ಹರಿಬಿಟ್ಟಿರುವ ಮಹಿಳೆ, ನಾನು ಆಗಾಗಾ ಕೆಲವು ಕಾರ್ಯಕ್ರಮಗಳಿಗೆ ಹೋಗುತ್ತಿರುತ್ತೇನೆ. ನಾನು ಸಿಂಪಲ್​ ಆಗಿ ಹೋಗುವುದರಿಂದ ಜನರೆಲ್ಲರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ನೀವು ಡಿ.ಕೆ ಸುರೇಶ್ ಪತ್ನಿ ಅಲ್ಲವೇ? ಏಕೆ ಇಷ್ಟೊಂದು ಸಿಂಪಲ್ ಆಗಿ ಬಂದಿದ್ದೀರಾ ಅಂತಾರೆ. ಡಿಕೆ ಸುರೇಶ್​ ಅಂದಮೇಲೆ ಸ್ಟೇಟಸ್​ ಮುಖ್ಯ ಅಲ್ಲವೇ? ಹಾಗಾಗಿ ನನಗೂ ಸ್ಟೇಟಸ್​ ಮುಖ್ಯವಾಗಿದೆ. ಆದ್ದರಿಂದ ರಾಯಲ್ ಆಗಿ ಇರಲು ಬಯಸುತ್ತೇನೆ ಎಂದಿದ್ದಾರೆ.

ವಿಡಿಯೋದಲ್ಲಿರುವ ಮಹಿಳೆಯ ಹೆಸರು ಆಕೆಯ ಫೇಸ್​ಬುಕ್​ ಖಾತೆಯ ಪ್ರಕಾರ ಪವಿತ್ರಾ ಎಂದು ಗುರುತಿಸಲಾಗಿದೆ. ತನ್ನ ಫೇಸ್​ಬುಕ್​ ಪೇಜ್​ನಲ್ಲೂ ಸಹ ತನ್ನ ಹೆಸರಿನ ಮುಂದೆ ಡಿ.ಕೆ. ಸುರೇಶ್ ( PavitraDksuresh Dodalahalli ) ​ ಹೆಸರನ್ನು ಸೇರಿಸಿಕೊಂಡಿದ್ದಾರೆ. ಏ.8ರಂದು ವಿಡಿಯೊ ಪೋಸ್ಟ್ ಮಾಡಿದ್ದು, ಸದ್ಯ ವಿಡಿಯೋ ವೈರಲ್​ ಆಗಿದೆ.

ವಿಡಿಯೋ ವೈರಲ್​ ಆಗಿ ಎಲ್ಲೆಡೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಡಿ.ಕೆ. ಸುರೇಶ್ ಪರ ವಕೀಲ ಪ್ರದೀಪ್ ಎಂಬುವರು ರಾಮನಗರದ ಸಿಇಎನ್ ಪೊಲೀಸ್ ಠಾಣೆಗೆ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಾಗಿದೆ. ಸುರೇಶ್ ಅವರ ಪತ್ನಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರ ಹಿಂದೆ ದುರುದ್ದೇಶವಿದೆ. ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಹೀಗಾಗಿ ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲ ಪ್ರದೀಪ್ ಅವರು ದೂರಿನಲ್ಲಿ ಉಲ್ಲೇಖಸಿದ್ದಾರೆ.