ಜಿಲ್ಲೆ

ಕಲಾವಿದನಲ್ಲಿರುವ ಕಲೆ ಜನರ ಸೊತ್ತು : ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ನಾಟಕ ಎನ್ನುವುದು ಸಮಾಜದ ಘಟನಾವಳಿಯನ್ನು ಸಮಾಜಕ್ಕೆ ತಿಳಿಸುವ ಪ್ರತಿರೂಪ. ಅದರಲ್ಲೂ ಹಳ್ಳಿಯ ತುಳು ನಾಟಕಗಳು ಸಮಾಜಕ್ಕೆ ಹಿಡಿದ ಕೈಗನ್ನಡಿ. ಕಲಾವಿದನಲ್ಲಿರುವ ಕಲೆ ಜನರ ಸೊತ್ತು. ಹಳ್ಳಿಯಲ್ಲಿ ಅದೆಷ್ಟೋ ಕಲಾವಿದರು ಈ ನೆಲೆಯಲ್ಲಿ ತಮ್ಮ ಅಭಿನಯ ಚಾತುರ್ಯ ಪ್ರದರ್ಶಿಸಿದ್ದಾರೆ ಎಂದು ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಹೇಳಿದರು.

ಚಿತ್ತಾರ ಮುಡಿಪು ವತಿಯಿಂದ ಹೂಹಾಕುವಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ‘ಹಳ್ಳಿದ ತುಳು ನಾಟಕ ನೆಂಪುದ ಪಾತೆರ ಕತೆ’ ಎಂಬ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಟಕ ನಿರ್ದೇಶಕ ವಿದ್ದು ಉಚ್ಚಿಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಳ್ಳಿ ನಾಟಕಗಳ ಮೂಲಕ ಮನಸ್ಸು ಕಟ್ಟುವ, ಸೌಹಾರ್ದ ಬೆಳೆಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಯುವ ಸಮಾಜ ಇಂತಹ ನಾಟಕದ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ ಎಂದರು.

ಸಾಹಿತಿ ಚಂದ್ರಹಾಸ ಕಣಂತೂರು, ಚಿತ್ತಾರದ ಸದಸ್ಯ ಕಲ್ಲೂರು ನಾಗೇಶ್, ಸುರೇಶ್ ಕೊಟ್ಟಾರಿ ರಂಗಭೂಮಿಯ ವಿವಿಧ ಪ್ರಕಾರಗಳ ಕುರಿತು ವಿಷಯ ಮಂಡಿಸಿದರು. ವೈ.ಬಿ.ಸುಂದರ್ ಇರಾ ಕಲಾತಂಡಗಳ ಸಂವಾದ ನಡೆಸಿಕೊಟ್ಟರು. ಸತೀಶ್ ಮತ್ತು ಮಲ್ಲಿಕಾ ಶೆಟ್ಟಿ ಹಳ್ಳಿಯಲ್ಲಿ ಪ್ರದರ್ಶನಗೊಂಡ ಕೆಲವು ತುಳು ನಾಟಕದ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಸ್ವಾತಿ ಸತೀಶ್ ಕೀಬೋರ್ಡ್‌ನಲ್ಲಿ ಸಹಕರಿಸಿದರು. ಜಯರಾಮ ಪೂಜಾರಿ ಇರಾ, ಸಂತೋಷ್ ಶೆಟ್ಟಿ, ವೆಂಕಟೇಶ್ ಮುಡಿಪು ಸಹಕರಿಸಿದರು.

ಬಾಳೆಪುಣಿ ಜನಜೀವನ ಅಧ್ಯಕ್ಷ ರಮೇಶ ಶೇಣವ, ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ, ಹೂಹಾಕುವಕಲ್ಲು ಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು. ಹೈದರ್ ಕೈರಂಗಳ ಸ್ವಾಗತಿಸಿದರು. ಚಂದ್ರಶೇಖರ ಪಾತೂರು ನಿರೂಪಿಸಿದರು.